ADVERTISEMENT

‘ನಾ ಕುಡಿಯೋದಿಲ್ಲ...’

ಗುರು ಪಿ.ಎಸ್‌
Published 20 ಫೆಬ್ರುವರಿ 2019, 20:09 IST
Last Updated 20 ಫೆಬ್ರುವರಿ 2019, 20:09 IST
ಚುರುಮುರಿ
ಚುರುಮುರಿ   

‘ಮಾತೆತ್ತಿದರೆ ಕೋಟಿ ಅಂತಾರೆ... ಈ ಬಾಲಿವುಡ್ ನಟರ ಸಹವಾಸವೇ ಬೇಡ’ ಎಂದು ಬೈದುಕೊಳ್ತಾ ತಲೆ ಮೇಲೆ ಕೈ ಹೊತ್ತು ಕೂತಿದ್ರು ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ನ ಆಯೋಜಕರು. ‘ಯಾಕ್ ಸರ್, ಡಲ್ಲಾಗಿದೀರಿ’ ಕೇಳ್ದ ವಿಜಿ. ‘ಬಾಲಿವುಡ್ ನಟ-ನಟಿಯರ ಆಕರ್ಷಣೆ ಇಲ್ಲದಿದ್ರೆ ಚಿತ್ರೋತ್ಸವ ಸಪ್ಪೆ ಆಗಿಬಿಡುತ್ತೆ. ಏನ್ ಮಾಡಬೇಕೋ ತಿಳೀತಿಲ್ಲ’ ಆಕಾಶ ನೋಡ್ತಾ ಹೇಳಿದ್ರು ಆಯೋಜಕ.

‘ಚಲನಚಿತ್ರೋತ್ಸವಕ್ಕೆ ನಮ್ ರಾಜಕಾರಣಿಗಳಿಗಿಂತ ಒಳ್ಳೆಯ ಗೆಸ್ಟ್‌ಗಳು ಬೇಕಾ ಸರ್ ನಿಮಗೆ... ಚೀಟಿ ರವಿಯವರನ್ನೇ ಕರೆಸಿ... ಅವರು ಒಳ್ಳೆಯ ಆ್ಯಕ್ಟರ್ ಕೂಡ’ ಅಮೂಲ್ಯ ಸಲಹೆ ಕೊಟ್ಟ ವಿಜಿ.

‘ಹೌದಾ! ಅವರು ಯಾವ ಫಿಲ್ಮ್ ಮಾಡಿದಾರೆ’ ಕುತೂಹಲದ ಪ್ರಶ್ನೆ ತೂರಿಬಂತು. ‘ಆ್ಯಕ್ಸಿಡೆಂಟ್’. ‘ಅದು ಶಂಕರ್ ನಾಗ್ ಅವರದಲ್ವಾ’ ಕೇಳಿದ್ರು ಸಂಘಟಕ.

ADVERTISEMENT

‘ಇದು ನ್ಯೂ ವರ್ಷನ್ ಸಿನಿಮಾ ಸರ್. ಸೋಲೋ ಹೀರೊ. ಫಿಲ್ಮ್‌ನಲ್ಲಿ ಒಂದ್ ಸಾಂಗ್ ಕೂಡ ಇದೆ, ‘ನಾ ಕುಡಿಯೋದಿಲ್ಲ... ನಾನದನ್ನ ನೋಡೇ ಇಲ್ಲ’ ಅಂತಾ... ಸಖತ್ ಹಿಟ್ ಆಗಿದೆ. ಅದಕ್ಕೆ ರವಿಯವರನ್ನೇ ಗೆಸ್ಟ್ ಆಗಿ ಕರೀರಿ ಸರ್’ ಹೇಳ್ದ ವಿಜಿ.

‘ನಟ ಆಯ್ತು... ತಾಂತ್ರಿಕ ವರ್ಗದಿಂದಲೂ ಒಂದಿಬ್ಬರು ಗಣ್ಯರು ಬೇಕಲ್ಲ?’ ಆಯೋಜಕ ಕೇಳಿದ್ರು.

‘ಆಪರೇಷನ್ ಆಡಿಯೊ’ ಫಿಲ್ಮ್‌ನ ಸೌಂಡ್ ರೆಕಾರ್ಡರ್ ಕುಮಾರ ಬ್ರದರ್, ಅದಕ್ಕೆ ಹಿನ್ನೆಲೆ ಧ್ವನಿ ನೀಡಿರೋ ಆಡಿಯೂರಪ್ಪನವರನ್ನ ಕರೆಸಬಹುದು ಸರ್... ಹೋಮ-ಹವನ ಸೀನ್‌ಗೆ ಅದ್ಭುತ ಸೆಟ್ ಹಾಕೋ ಆರ್ಟ್‌ ಡೈರೆಕ್ಟರ್‌
ರಾವಣ್ಣನವರನ್ನೂ, ಫೈಟ್ ಮಾಸ್ಟರ್ ‘ಕಂಪ್ಲಿ’ಕೇಟೆಡ್ ಗಣೇಶ್ ಅವರನ್ನೂ ಆಹ್ವಾನಿಸಬಹುದು’ ತಲೆಯಲ್ಲಿ ಐಡಿಯಾಗಳ ಕಾರ್ಖಾನೆಯನ್ನೇ ಇಟ್ಟಿರುವಂತೆ ಹೇಳ್ತಾ ಹೋದ ವಿಜಿ.

‘ಅದೆಲ್ಲ ಸರಿ. ನಿರೂಪಣೆಗೆ ಒಬ್ಬರು ಬೇಕು. ಅವರು ಮಾತಲ್ಲೇ ಮೋಡಿ ಮಾಡುವಂತಿರಬೇಕು. ಅಂಥವರು ಯಾರಾದ್ರೂ ಇದ್ರೆ ಹೇಳು’ ಕೇಳಿದ್ರು ಆಯೋಜಕರು.

‘ನಮೋ ನಮೋ ನಮೋ’ ಎಂದುತ್ತರಿಸಿ, ಕೈ ಮುಗಿದು ಹೊರಟ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.