ADVERTISEMENT

ನೀವೇ ಕಾರಣ...!

ಬಿ.ಎನ್.ಮಲ್ಲೇಶ್
Published 2 ಜನವರಿ 2020, 22:13 IST
Last Updated 2 ಜನವರಿ 2020, 22:13 IST
   

ಹೊಸ ವರ್ಷದ ಮೊದಲ ದಿನ ಬೆಳ್ಳಂಬೆಳಿಗ್ಗೆ ತೆಪರೇಸಿಯನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಇನ್‌ಸ್ಪೆಕ್ಟರು ಗರಂ ಆಗಿದ್ದರು. ‘ಏನಯ್ಯ ಕುಡಿದುಬಿಟ್ರೆ ಯಾರ ಮನೆಗೆ ಬೇಕಾದ್ರೂ ನುಗ್ಗಬಹುದು ಅಂದ್ಕೊಂಡಿದೀಯ?’

‘ಇಲ್ಲ ಸಾ, ನಂಗೊತ್ತಿಲ್ಲ...’ ತೆಪರೇಸಿ ತೊದ
ಲಿದ. ರಾತ್ರಿ ಮಂಪರು ಇನ್ನೂ ಇಳಿದಿರಲಿಲ್ಲ.

‘ಏನ್ ಗೊತ್ತಿಲ್ಲ? ಹೊಸ ವರ್ಷದ ಪಾರ್ಟಿ ಅಂತ ಎಣ್ಣೆಗೆ ನೀರು ಹಾಕ್ಕಂಡಿದ್ಯೋ ಅಥವಾ ನೀರಿಗೇ ಎಣ್ಣೆ ಹಾಕ್ಕಂಡಿದ್ಯೋ?’

ADVERTISEMENT

‘ಗೊತ್ತಿಲ್ಲ ಸಾ... ಅದಿರ‍್ಲಿ, ನೀವ್ಯಾಕೆ ಬೆಳಬೆಳಿಗ್ಗೆ ಬಾರ್‍ಗೆ ಬಂದಿದೀರಿ?’

‘ಏಯ್, ಒದೀತೀನಿ ನೋಡು, ಇದು ಪೊಲೀಸ್ ಸ್ಟೇಶನ್ನು. ಹೇಳು, ರಾತ್ರಿ ಕುಡಿದು ಇನ್ನೊಬ್ರ ಮನೆಗೆ ಯಾಕೆ ಹೋಗಿದ್ದೆ?’

ತೆಪರೇಸಿ ನಕ್ಕ. ‘ಒಳ್ಳೆ ಕತೆ, ನನ್ ಮನೆಗೆ ಹೋಗೋಕೇ ನಂಗೆ ಆಗ್ತಿರ್‍ಲಿಲ್ಲ. ಇನ್ನು ಬೇರೆಯೋರ ಮನೆಗೆ ಹೋಗ್ತೀನಾ?’

‘ಮತ್ತೆ ಕಂಪ್ಲೇಂಟ್ ಕೊಡೋಕೆ ಅವರಿಗೇನು ಹುಚ್ಚಾ? ರಾತ್ರಿ ಫುಲ್ ಟೈಟಾಗಿ ಆ ಮೂಲೆಮನೆ ಪರಿಮಳಾ ಅವರ ಮನೆ ಮೆಟ್ಟಿಲ ಮೇಲೆ ಮಲಗಿದ್ಯಂತೆ?

‘ಹೌದಾ ಸಾ? ಪರಿಮಳಾ ಅಂದ್ರೆ ಯಾರು?’

‘ನಿಮ್ಮ ಅತ್ತೆ ಮಗಳು... ತೆಗೆದು ಬಿಟ್ಟಾ ಅಂದ್ರೆ ಅಷ್ಟೆ...’ ಇನ್‌ಸ್ಪೆಕ್ಟರು ಲಾಠಿ ತಿರುಗಿಸಿದರು.

ತೆಪರೇಸಿ ತಲೆ ಕೆರೆದುಕೊಂಡು ‘ಹಾ... ಈಗ ನೆನಪಾತು. ಇದಕ್ಕೆಲ್ಲ ನೀವೇ ಕಾರಣ ಸಾ...’ ಅಂದ.

‘ನಾನಾ? ಯಾಕಲೆ, ಹೆಂಗೈತೆ ಮೈಗೆ?’

‘ಹೌದು ಸಾ, ನೀವೇ ಕಾರಣ. ನ್ಯೂ ಇಯರ್ ಪಾರ್ಟಿ ಬಗ್ಗೆ ಬಾರ್‍ನೋರಿಗೆ ನೀವೇನು ಆರ್ಡರ್ ಮಾಡಿದ್ರಿ? ಫುಲ್ ಟೈಟಾದೋರ‍್ನ ಅವರವರ ಮನೆಗೆ ಮುಟ್ಟಿಸೋ ಜವಾಬ್ದಾರಿ ಬಾರ್‍ನೋರ್‍ದೇ ಅಂತ ತಾನೆ?’

‘ಹೌದು, ಅದಕ್ಕೇ?’

‘ನಾನು ನಮ್ಮನೆ ರಸ್ತೆ ಕಾರ್ನರ್‌ಗೆ ಇಳಿಸಿ ಅಂತ ಹೇಳಿದ್ದೆ. ಬಾರ್‍ನೋರು ಕಾರ್ನರ್ ಮನೆ ಗೇಟ್ ತೆಗೆದು ಮೆಟ್ಟಿಲ ಮೇಲೆ ಮಲಗಿಸಿ ಹೋಗಿದಾರೆ ಅನ್ಸುತ್ತೆ. ನಾನೇನ್ ಮಾಡ್ಲಿ?’ ಇನ್‌ಸ್ಪೆಕ್ಟರು ತುಟಿಪಿಟಕ್ಕೆನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.