ADVERTISEMENT

ಗುದ್ದಾಮ ಪಂಡಿತರು

ಲಿಂಗರಾಜು ಡಿ.ಎಸ್
Published 17 ಫೆಬ್ರುವರಿ 2020, 20:00 IST
Last Updated 17 ಫೆಬ್ರುವರಿ 2020, 20:00 IST
   

‘ಈಗ ಅಪಘಾತಗಳದ್ದೇ ಸುದ್ದಿ ಅಲ್ಲವುರಾ ಸಾ. ಹಾಳಾದವು ಪಾರಿನ್ ಕಾರುಗಳು ಜನ ಕಂಡೇಟಿಗೆ ರೊಯ್ಯನೆ ಮ್ಯಾಲೆ ಬತ್ತವೆ. ಬಸ್ಸುಗಳಿಗೂ ತಲೆ ಕೆಟ್ಟೋಗದೆ’ ಅಂದೆ.

‘ಹ್ಞೂಂ ಕಣೋ, ಈಗ ಗುದ್ದೋಡದೇ ಸುದ್ದಿ. ಚೀನಾದಗೆ ಕೋವಿಡ್‌ ವೈರಸ್ ಗುದ್ದಿ ಸಾವಿರಾರು ಜನ ಹೊಗೆ ಹಾಕಿಸ್ಕಂಡವರೆ, ಡೆಲ್ಲೀಲಿ ಆಪು ಬಿಜೆಪಿಗೆ ಗುದ್ದಿ ಡ್ಯಾಮೇಜು ಮಾಡ್ಯದೆ. ಯಡುರಪ್ಪಾರ ಮಂತ್ರಿಮಂಡಲಕ್ಕೆ 11 ಜನ ಗುದ್ದಿ ಮೂಗೇಟಾಗೈತಂತೆ, ಈವತ್ತು ವಿಧಾನಮಂಡಲದಲ್ಲಿ ಯಾರು ಯಾರಿಗೆ ಗುಮ್ಮತರೋ ಗೊತ್ತಿಲ್ಲ, ಬೆಂಗಳೂರು ಪಾಲಿಕೆ ಆಪ್ ಕೈಗೆ ಬಂದು ಪರಕೇಲಿ ಬಾರಿಸ್ತದೆ ಅಂತ ಕಸ(ಬು)ದಾರರು, ಬಿಲ್ಲುಗಾರರು ಕಾಟನ್‍ಪೇಟೇಲಿ ಅಂತ್ರ ತರಕ್ಕೋಗವರಂತೆ!’ ಅಂದ್ರು ತುರೇಮಣೆ. ಅಷ್ಟರಲ್ಲಿ ಬಂದ ಫೋನ್ ಕರೆಯಲ್ಲಿ ಹತ್ತು ನಿಮಿಷ ಮಾತಾಡಿದ ತುರೇಮಣೆಗೆ ಟೆನ್ಶನ್ ಬಂದಿತ್ತು.

‘ಸಾರ್ ಏನಾಯಿತು?’ ಅಂತ ಕೇಳಿದೆ. ‘ಬೆಳಿಗ್ಗೆ ಮಗ ನನ್ನ ಹಳೇ ಲ್ಯಾಂಬ್ರೆಟ್ಟಾ ಸ್ಕೂಟರ್ ತಕಂದು ಲಾಲ್‍ತರಕಾರಿ ತರಕ್ಕೋಗಿದ್ದ. ದಾರೀಲಿ ಪೊಲೀಸ್ ಹಿಡಕಂದು ನಂಬರ್ ಪ್ಲೇಟ್ ಸ್ವಲ್ಪ ಮುರಿದೋಗದೆ ಯಾರಿಗೆ ಗುದ್ದಿದೆ, ಪೊಲೀಸ್ ಚೌಕಿಗೆ ನೀನೇನಾ ಡಿಕ್ಕಿ ಹೊಡದಿದ್ದು ಅಂತ ತಾರಾಮಾರಾ ಇಚಾರಣೆ ಮಾಡತಾವರಂತೆ’ ಅಂದ್ರು. ನನಗೆ ಆಶ್ಚರ್ಯವಾಯ್ತು ಗಂಟೆಗೆ 10 ಕಿ.ಮೀ. ಹೋಗಲಾರದ ಹಳೇ ಸ್ಕೂಟರು ಏನು ಮಾಡಾತು ಅಂತ. ‘ಆಮೇಲೆ’ ಅಂದೆ.

ADVERTISEMENT

‘ಈ ಥರ ಎನಕ್ವಯಿರಿ ಮಾಡಬೇಕಾದ್ರೆ ಅದು ನನ್ನ ಚಡ್ಡಿ ದೋಸ್ತು ಪೊಲೀಸು ಶಿವಣ್ಣನೇ ಇರಬೇಕು ಅಂತ ನೋಡಿದ್ರೆ ಅವನೇಯ. ಎಂತಾ ಘನಂದಾರಿ ಕೇಸು ಇಡಕಂದಿದ್ದೆ ಹಾಳು ಮಾಡಿಬುಟ್ಟಲ್ಲೋ ಅಂತ ಆಮೇಲೆ ಬುಟ್ಟ’ ಅಂದ್ರು.

‘ಅಲ್ಲಾ ಸಾ, ಲ್ಯಾಂಬ್ರೆಟ್ಟಾ ಸ್ಕೂಟರು ಪಾರಿನ್ ಕಾರೂ ಒಂದೇಯಾ?’ ಅಂದೆ. ಅದಕ್ಕೆ ತುರೇಮಣೆ ಉತ್ತರ ಕೊಟ್ಟರು ‘ಲೇ ಮಗಾ ಒಂದು ತಿಳಕಾ ಕಾಯ್ದೆ- ಕಾನೂನು ಇರದು ನನ್ನ- ನಿನ್ನಂತಾ ಹಡಾಲು ನನಮಕ್ಕಳಿಗೆ ಮಾತ್ರಾ! ರಾತ್ರಿ ದಯ್ಯ-ಜಡೆಮುನಿಗಳು ಆಚೆಗೆ ಕಡೆಯಕ್ಕೆ ಮೊದಲೇ ಮನೆ ಸೇರಿಕ್ಯಳಿ ಅಂತ ನಮ್ಮವ್ವ ಹೇಳದು ಸರಿಯಲ್ಲವಾ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.