ADVERTISEMENT

ಚುರುಮುರಿ | ಬಂತಿದೋ ಅಮೃತಕಾಲ

ಸುಮಂಗಲಾ
Published 13 ಫೆಬ್ರುವರಿ 2022, 20:30 IST
Last Updated 13 ಫೆಬ್ರುವರಿ 2022, 20:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

‘ನಮ್ಮ ದೇಶದಾಗೆ 5.3 ಕೋಟಿ ಜನ ನಿರುದ್ಯೋಗಿಗಳು ಅದಾರಂತ. ದಿನದಿಂದ ದಿನಕ್ಕೆ ಚೀನಾದಿಂದ ತರಿಸೂ ಸರಕು ಹೆಚ್ಚಾಗೈತಿ. ಆತ್ಮನಿರ್ಭರ್ ಹೋಗಿ ಚೀನಾನಿರ್ಭರ್ ಆಗೀವಿ. ಅದ್ಕೇ ಇಷ್ಟು ನಿರುದ್ಯೋಗ’ ಸುದ್ದಿ ಓದುತ್ತ ಉದ್ಗರಿಸಿದೆ.

‘ಎಲ್ಲದಾರ 5.3 ಕೋಟಿ ನಿರುದ್ಯೋಗಿಗಳು? ಎಲ್ಲಾ ಸುಳ್ಳು ಅಂಕಿಅಂಶಗಳು. ನಮ್ಮಲ್ಲಿ ಎಷ್ಟಕೊಂದು ನವೋದ್ಯಮಗಳು ತಲೆಯೆತ್ತಿ ನಿಂತಾವು, ರಗಡ್ ಮಂದಿಗಿ ಉದ್ಯೋಗ ಕೊಟ್ಟಾರ. 5.3 ಕೋಟಿ ನಿರುದ್ಯೋಗಿಗಳಿಲ್ಲ, ಇಡೀ ದೇಶದಾಗೆ ಒಬ್ಬರೇ ಒಬ್ಬರು ನಿರುದ್ಯೋಗಿ ಅದಾರಂತ ನಮ್ಮ ಸಂಸದ ತೇಜಸ್ವಿಯಣ್ಣ ಹೇಳ್ಯಾನ’ ಬೆಕ್ಕಣ್ಣ ವಾದಿಸಿತು.

‘ಯಾರಲೇ ಆ ಏಕೈಕ ನಿರುದ್ಯೋಗಿ? ಮತ್ತ ನಿಮ್ಮ ನವೋದ್ಯಮಗಳು ಯಾವೂ ಅವ್ರಿಗಿ ನೌಕರಿ ಕೊಟ್ಟಿಲ್ಲೇನು?’ ನಾನು ಬೆರಗಿನಿಂದ ಕೇಳಿದೆ.

ADVERTISEMENT

‘ಕಾಂಗ್ರೆಸ್ ಪಕ್ಷದ ರಾಜಕುಮಾರನೇ ಆ ಏಕೈಕ ನಿರುದ್ಯೋಗಿ ಅಂತ ತೇಜಸ್ವಿಯಣ್ಣ ಹೇಳ್ಯಾನ’.

‘ಅಲ್ಲಲೇ... ಒಂಬತ್ತು ಸಾವಿರಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳು ಹೊಟ್ಟೆಪಾಡು ಕಷ್ಟ ಆಗೈತಂತ ಆತ್ಮಹತ್ಯೆ ಮಾಡ್ಕಂಡಾರ ಅಂತ ಕೇಂದ್ರ ಗೃಹ ಸಚಿವಾಲಯನೇ ಹೇಳೈತಿ’ ನಾನು ಮತ್ತೊಂದು ಸುದ್ದಿ ತೋರಿಸಿದೆ.

‘ಅದೇ ಆ ಒಂಬತ್ತು ಸಾವಿರ ಚಿಲ್ಲರೆ ಮಂದಿ ನಿರುದ್ಯೋಗಿಗಳು ಇದ್ದವರು ಆತ್ಮಹತ್ಯೆ ಮಾಡಿಕೆಂಡ ಮ್ಯಾಗೆ ಉಳಿದ ಏಕೈಕ ನಿರುದ್ಯೋಗಿ ಅಂದ್ರ ರಾಹುಲ್‌ ಅಂಕಲ್ ಅಂತ ತೇಜಸ್ವಿಯಣ್ಣ ಹೇಳಿದ್ದು’ ಎಂದು ಸಂಸದರ ಮಾತಿಗೆ ಹೊಸ ವ್ಯಾಖ್ಯಾನ ನೀಡಿತು.

‘ಅಷ್ಟೇ ಅಲ್ಲ... ಈಗ ಕಾಲೇಜೊಳಗೆ ಕಲಿಯಾಕೆ ಹತ್ಯಾರಲ್ಲ, ಆ ಗಂಡುಹುಡುಗ್ರಲ್ಲಿ ಮುಂದ ಯಾರಿಗಾದರೂ ನೌಕರಿ ಸಿಗಲಿಲ್ಲ ಅಂದ್ರ, ಉತ್ತರಪ್ರದೇಶದಾಗೆ ಶಾಲು ಫ್ಯಾಕ್ಟರಿ ಶುರು ಮಾಡೀವಿ, ಅಲ್ಲಿ ನೌಕರಿ ಕೊಡಸ್ತೀವಿ ಅಂತ ನಮ್ಮ ಈಶ್ವರಪ್ಪ ಅಂಕಲ್ ಅಂದಾರ. ಇನ್‌ಮ್ಯಾಗೆ ರಾಹುಕಾಲನೂ ಇಲ್ಲ, ರಾಹುಲನ ಕಾಲವಂತೂ ಎಂದಿಗೂ ಬರಂಗಿಲ್ಲ. ಇನ್ನೇನಿದ್ರೂ ಅಮೃತಕಾಲ... ಕರ್ನಾಟಕವೇ ಅದರ ಪ್ರಯೋಗ ಶಾಲೆ’ ಬೆಕ್ಕಣ್ಣ ಹೆಮ್ಮೆಯಿಂದ ಬಡಬಡಿಸುತ್ತಿದ್ದರೆ ನಾನು ಪೆಂಗಳಂತೆ ನಿಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.