‘ವಟ್ಟಿಗಿಟ್ಟಿಲ್ದುದ್ರು ಜುಟ್ಟಿಗ್ ಮಲಿಗಿ ಹೂವು ಅಂದುದ್ರಂತೆ. ಅಂಗಾಗೇತೀಗ ಬದುಕು’ ಅಂದ ಚಂಬಸ್ಯ.
ಅದಕ್ಕೆ ರುದ್ರೇಶಿ ‘ಅದ್ಯಾಕಲೇ ಒಳ್ಳೆ ಆಕಾಸ ತಲಿಮ್ಯಾಗ್ ಬಿದ್ದವ್ರಂಗಾಡ್ತದಿಯಾ? ಅಂತದೇನಾಗೇತೀಗ?’ ಅಂದ.
‘ಆಕಾಸೇನು ತಲಿ ಮ್ಯಾಕ್ ಬಿದ್ದುಲ್ಲ. ನಾನೇ ಇಪ್ಪಟ್ಟು ಆಕಾಸುಕ್ಕೆ ಏಣಿ ಆಕ್ತಾದಾನಿ’.
ಗೊಂದಲಗೊಂಡ ರುದ್ರೇಶಿ ‘ಅದೇನಂತ ಬಿಡಿಸ್ಯೇಳಲೇ, ಅರ್ಥಾಗವಲ್ದು’ ಎಂದ.
‘ನೋಡಪ್ಪಜ್ಜಿ, ಈ ವರ್ಸ ಕ್ವರಾನ ಬಂದು ಮದ್ಲೇ ರೊಕ್ಕ ಆಡ್ತುಲ್ಲ. ಈಗ ಜಡಿಮಳಿ ಹಿಡಕ್ಯಂದು ಮಕ್ಕಿಜ್ವಾಳೆಲ್ಲ ಮಕ್ಯಂಡದೆ. ಇಷ್ಟಿದ್ರು ಹಬ್ಬ-ಹುಣಿವಿ ಶ್ರಾವುಣ್ಮಾಸ ಜಾತ್ರಿ ಪಿತ್ರುಪಕ್ಸ ಎಲ್ಲಾ ಮಾಡೇವಿ. ಇನ್ನೂ ಏಸಂತ ಖರ್ಚು ಮಾಡದಲೇ’ ಚಂಬಸ್ಯ ಗೊಣಗಿದ.
ಆಗ ರುದ್ರೇಶಿ ‘ಇದೆಲ್ಲ ಏನ್ ಮಹಾ! ಖರ್ಚಿಲ್ದುದ್ರೆ ಸಂಸಾರ ನಡಿತಾವಾ? ಗಂಡ ಆದವ್ನು ಗುಂಡಿಗಿನ ಯಾವಾಗಲೂ ಗಟ್ಟಿ ಇಟ್ಟುಕ್ಯಂದಿರ್ಬೇಕು. ಅಷ್ಟಕ್ಕೂ ವುಟ್ಸಿದ್ ದ್ಯಾವ್ರು ಪಿಜ್ಜಾ ಮೇಯ್ಸದುಲ್ವಾ?’ ಅಂದ.
‘ಅದೆಲ್ಲ ಸರಿ ಕಣಲೇ, ಇಪ್ಪಟ್ಟು ಚಾಲೆಂಜ್ ಬ್ಯಾರೆ ಗೆದ್ದು ಸೆಲೆಬ್ರೇಟ್ ಮಾಡ್ಬೇಕಾಗೇತಿ. ಅದೇ ನಂಗೀಗ ದೊಡ್ಡ ಟೆನ್ಸನ್ನು!’
‘ಅದ್ಯಾವ ಚಾಲೆಂಜಲೇ!?’ ರುದ್ರೇಶಿ ಕುತೂಹಲದಿಂದ ಕೇಳಿದ.
‘ಅದೇ ಕಪಲ್ಸ್ ಚಾಲೆಂಜ್! ಗಂಡ-ಯೆಂಡ್ತಿ ಪೋಟೊ ವಡಕ್ಯಂದು ಪೇಸ್‍ಬುಕ್ಕಿನ್ಯಾಗ್ ಅಪ್‍ಲೋಡ್ ಮಾಡಿಕ್ಯಳದು! ಅದುಕ್ಕೆ ನನ್ನೆಂಡ್ತಿ ಅರ್ಜೆಂಟಾಗಿ ವಸ ಸೀರಿ, ಚಿನ್ನದ ಸರ ಕೊಡಿಸು, ಅದು ಆಕ್ಯಂದ್ ಪೋಟೊ ವಡಕಳನ. ಚಾಲೆಂಜ್‍ನ್ಯಾಗೆ ವಸ ಸೀರಿ ಸರದಾಗೆ ನಾನ್ ರಿಚ್ ಆಗಿ ಮಿಂಚಬಕು. ಅದೊಂದು ಲೈಫ್‍ಟೈಮ್ ಮೆಮೊರಿ ಆಕ್ಕತಿ ಅಂತ ಹಟ ಮಾಡ್ತದಾಳೆ. ಅದುಕ್ಕೇ ನನ್ಗೆ ಟೆನ್ಸನ್ನಾಗೇತಿ’.
ಇದು ಕೇಳಿ ಗಾಬರಿಯಾದ ರುದ್ರೇಶಿ ‘ಈ ವಸ ವಿಷ್ಯ ನನ್ನೆಂಡ್ತಿಗಿನ್ನೂ ಗೊತ್ತುಲ್ಲ, ಈ ಚಾಲೆಂಜ್ ಗಲಾಟಿ ಮುಗಿಯೊ ಮಟ ಪೇಸ್‍ಬುಕ್ಕನ್ನೇ ಡಿಲೀಟ್ ಮಾಡಿದ್ರೆಂಗೆ?’ ಅಂದುಕೊಂಡು ಹೆಂಡತಿ ಮೊಬೈಲಿನಿಂದ ಫೇಸ್‍ಬುಕ್ ಡಿಲೀಟ್ ಮಾಡಲು ಮನೆಕಡೆ ಓಡಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.