ADVERTISEMENT

ಚುರುಮುರಿ: ಮಿಠಾಯಿ ಭಾಗ್ಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 19:30 IST
Last Updated 1 ಜೂನ್ 2022, 19:30 IST
churumuri
churumuri   

ಪಠ್ಯಪುಸ್ತಕದ ಕಹಿ ಅನುಭವದಿಂದ ವಿದ್ಯಾಮಂತ್ರಿ ನಾಗೇಶಣ್ಣ ಕಂಗೆಟ್ಟು ನಿದ್ರೆಗೆಟ್ಟಿ ದ್ದರು. ಶಾಲಾ ಮಕ್ಕಳಿಗೆ ಕಡ್ಲೆಮಿಠಾಯಿ ನೀಡುವ ಸಿಹಿ ಸುದ್ದಿ ಪ್ರಕಟಿಸಿ ಕಹಿ ಮರೆಯುವ ಪ್ರಯತ್ನ ಮಾಡಿದ್ದರು.

ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣಿನ ಪೌಷ್ಟಿಕಾಂಶ ಸಾಕಾಗುವುದಿಲ್ಲ, ಗಾಂಧಿ ಮೆಚ್ಚಿದ ಬಡವರ ಬಾದಾಮಿ ಕಡ್ಲೆಕಾಯಿಯ ಮಿಠಾಯಿ ಕೊಟ್ಟರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ಶಾಲೆಗೆ ಬರುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳ ಕೊರತೆ, ಅವರ ಅಪೌಷ್ಟಿಕತೆ ಎರಡೂ ನೀಗುತ್ತವೆ ಎಂಬುದು ಸಚಿವರ ಆಶಯ.

ಮಿಠಾಯಿ ಜೊತೆಗೆ ಚಾಕೊಲೇಟ್, ಐಸ್‍ಕ್ರೀಂ ಬೇಕು ಎಂದು ಮಕ್ಕಳು ಆಸೆಪಡಬಹುದು. ಆ ಆಸೆಯನ್ನೂ ಈಡೇರಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸಬೇಕು ಎನ್ನುವ ಸದಾಶಯವೂ ಸಚಿವರಿಗಿರಬಹುದು.

ADVERTISEMENT

‘ಮಂತ್ರಿಗೆ ಜಯವಾಗಲಿ...’ ಎಂದು ಕೂಗುತ್ತಾ ರೈತರು ಬಂದು ವಿದ್ಯಾಮಂತ್ರಿಗೆ ಹಾರ ಹಾಕಿದರು.

‘ನಾವು ಕಡ್ಲೆಕಾಯಿ ಬೆಳೆಗಾರರು, ಸರ್ಕಾರ ಕಡ್ಲೆಕಾಯಿ ಖರೀದಿಸಿ ಶಾಲಾ ಮಕ್ಕಳಿಗೆ ಕಡ್ಲೆಮಿಠಾಯಿ ಕೊಡುವ ಯೋಜನೆ ಸ್ವಾಗತಾರ್ಹ. ಈ ಯೋಜನೆ ಜಾರಿಗೆ ತಂದು ಬೆಳೆಗಾರರಿಗೆ ಬೆಂಬಲ ನೀಡಿ’ ಎಂದು ಮನವಿ ಮಾಡಿ, ಅಭಿನಂದಿಸಿ ಹೋದರು.

ಸ್ವಲ್ಪ ಹೊತ್ತಿಗೆ, ‘ವಿದ್ಯಾಮಂತ್ರಿಗೆ ಧಿಕ್ಕಾರ...’ ಎಂದು ಕೂಗುತ್ತಾ ಮತ್ತೊಂದು ರೈತರ ಗುಂಪು ಬಂತು. ‘ನಾವು ಕೊಬ್ಬರಿ ಬೆಳೆಗಾರರು, ನೀವು ರೈತರ ವಿಚಾರದಲ್ಲಿ ತಾರತಮ್ಯ ಮಾಡ್ತಿದ್ದೀರಿ, ಸರ್ಕಾರ ಕೊಬ್ಬರಿಯನ್ನೂ ಖರೀದಿಸಿ ಮಕ್ಕಳಿಗೆ ಕಡ್ಲೆಕಾಯಿ ಮಿಠಾಯಿ ಜೊತೆ ಕೊಬ್ಬರಿ ಮಿಠಾಯಿಯನ್ನೂ ಕೊಟ್ಟು ನಮಗೆ ಬೆಂಬಲ ನೀಡಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ...’ ಎಂದು ಎಚ್ಚರಿಸಿ ಹೋದರು.

ವಿದ್ಯಾಮಂತ್ರಿ ನಾಗೇಶಣ್ಣ ಗಾಬರಿಯಾಗಿ ನಿದ್ರೆಯಿಂದ ಎಚ್ಚರಗೊಂಡು ಬೆವರು ಒರೆಸಿಕೊಂಡರು.

ರೈತರು ಕನಸಿನಲ್ಲಿ ಬಂದರೆ ಶ್ರೇಯಸ್ಸು ಆಗುತ್ತದೆ ಅನ್ನೋ ದೇವೇಗೌಡರ ಮಾತು ನೆನಪಾಗಿ ಸಚಿವರು ಸಮಾಧಾನಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.