ADVERTISEMENT

ಹೆಸರಲ್ಲೇ ರೈಲು ಹತ್ತಿಸಬೇಕು!

ಸುಮಂಗಲಾ
Published 28 ಫೆಬ್ರುವರಿ 2019, 5:16 IST
Last Updated 28 ಫೆಬ್ರುವರಿ 2019, 5:16 IST
   

‘ನಿಮ್ಮನೇಲಿ ಹಳೇ ತಾಳೆಗರಿ ಓಲೆ ಇವೆ ಅಂದಿದ್ರಲ್ಲ,ಇಲ್ಲಿ ಇಟ್ಕೊಂಡಿದೀರ ಅಥ್ವಾ ಊರಿನ ಮನೇಲಿದ್ಯಾ?’ ಹತ್ತಿರ ಸರಿದ ಕಿರಿಯ ಸಹೋದ್ಯೋಗಿ ಪಿಸುಗುಟ್ಟಿದಳು. ನಾನು ಹೌಹಾರಿದೆ. ‘ಇಲ್ಲಿ ಕೀಬೋರ್ಡ್ ಕುಟ್ಟೋ ಕೆಲಸ ಬಿಟ್ಟು ಆ್ಯಂಟಿಕ್ ಪೀಸ್‌ಗಳ ಗುಜರಿಅಂಗಡಿಹಾಕ್ತಿದ್ದೀಯಾ’ ಎಂದೆ.

‘ಕುಟ್ಟೋ ಕೆಲಸಕ್ಕೇ ಬೇಕಿತ್ತು. ಅದ್ರಲ್ಲಿ ಪದ್ಯಗಳಿವೆ ಅಂತೇನೋ ಹೇಳಿದ್ರಿ... ಅವು ಸಂಸ್ಕೃತ ಪದ್ಯಗಳಾ...’

‘ತಾಳೆ ಓಲೆ, ಸಂಸ್ಕೃತ ಪದ್ಯ ಎಲ್ಲ ಇಟ್ಕಳಕೆ ನಾನೇನು ಕಾಳಿದಾಸನ ವಂಶಸ್ಥೆನಾ… ಶತಮಾನ ಹಳೇದಾದ ಕನ್ನಡದ ಸ್ಕೂಲು ಪುಸ್ತಕ ಇದೆ ಅಂತ ಹೇಳಿದ್ದೆ’.

ADVERTISEMENT

‘ನಿಮ್ಮಜ್ಜ ಒಲೆಗೆ ಹಾಕ್ದೇ ಉಳಿದ ಪುಸ್ತಕ ಅನ್ನಿ. ಛೇ… ನಿಮ್ಮ ಹತ್ರ ಹಳೇ ಸಂಸ್ಕೃತ ಹೆಸರುಗಳು ಸಿಗುತ್ತೇನೋ ಅಂದ್ಕಂಡೆ’ ನಿರಾಸೆಯಿಂದ ಗೊಣಗುತ್ತ ತನ್ನ ಲ್ಯಾಪ್‌ಟಾಪಿನಲ್ಲಿ ಮುಳುಗಿದಳು. ‘ಮನೆ ಕಟ್ಟಿಲ್ಲ, ಮಗು ಇಲ್ಲ, ನಿಂಗ್ಯಾಕೆ ಹೆಸ್ರು’ ಎಂದು ಅವಳ ಲ್ಯಾಪ್‌ಟಾಪಿನಲ್ಲಿ ಇಣುಕಿದೆ. ಹತ್ತಾರು ಅಂತರ್ಜಾಲ ತಾಣಗಳನ್ನು, ಗೂಗಲ್ ಟ್ರಾನ್ಸ್‌ಲೇಟ್ ಅನ್ನೂ ತೆಗೆದಿಟ್ಟುಕೊಂಡು, ಘನಗಂಭೀರವಾಗಿ ಏನೋ ಹುಡುಕುತ್ತಿದ್ದಳು.

‘ಅಹ್ಮದಾಬಾದಿಂದ ಮುಂಬೈ ನಡುವೆ ಎಷ್ಟ್ ಬೇರೆ ಬೇರೆ ಭಾಷೆ ಮಾತಾಡ್ತಾರಲ್ಲ, ಆ ಯಾವುದಾದರೂ ಭಾಷೇಲಿ ಅಥ್ವಾ ಸಂಸ್ಕೃತದಲ್ಲಿ ಕಮಲ, ಕೇಸರಿ, ಬುಲೆಟ್, ರೈಲು, ಸ್ಪೀಡ್, ಓಡು, ಹಾರಿಕೊಂಡು ಹೋಗು... ಹಿಂಗೆ ಯಾವುದಾದ್ರೂ ಸರಿಯಾದ ಪದ ಇಟ್ಕೊಂಡು ಒಂದೊಳ್ಳೆ ಹೆಸರು ಟಂಕಿಸ್ತಾ ಇದ್ದೀನಿ. ಆಮೇಲೆ ಲೋಗೋ ನಾನೇ ಡಿಸೈನ್ ಮಾಡ್ತೀನಿ’ ಎನ್ನುತ್ತ ದೇಶದ ಮೊದಲ ಬುಲೆಟ್ ಟ್ರೇನಿಗೆ ಹೆಸರು, ಲೋಗೋ ಸೂಚಿಸಿ, ಗೆದ್ದರೆ ಒಂದೂವರೆ ಲಕ್ಷಬಹುಮಾನ ಎಂಬ ಜಾಹೀರಾತು ತೋರಿಸಿದಳು.

‘ಹೆಸರು ಕೇಳಿದ್ರೇನೆ ಬುಲೆಟ್ ಟ್ರೇನಿನಲ್ಲಿ ಝೂಮ್ ಅಂತ ಹಾರಿಕೊಂಡು ಹೋದಂಗೆ ಅನ್ನಿಸ್ಬೇಕು. ಐದು ವರ್ಷದ ಹಿಂದೆ ಹೆಸರು ಕೇಳಿಯೇ ಜನ ನಮೋ ರೈಲು ಹತ್ತಿದ್ರಲ್ಲ… ಅಂಥಾ ಹೆಸ್ರು’ ನಗುತ್ತಾ ಮತ್ತೆ ಹುಡುಕಾಟದಲ್ಲಿ ಮುಳುಗಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.