ADVERTISEMENT

ಕಮಲಿಯ ಡೈರಿ ಕಥೆ

ಲಿಂಗರಾಜು ಡಿ.ಎಸ್
Published 25 ಮಾರ್ಚ್ 2019, 20:32 IST
Last Updated 25 ಮಾರ್ಚ್ 2019, 20:32 IST
   

ನಮ್ಮ ವಠಾರದ ಎಡಗಡೆ ಮನೆಯಲ್ಲಿ ನವಯುವತಿ ಕಮಲಿ, ಬಲಗಡೆ ಮನೇಲಿ ಸುಂದರಿ ಕಾಂಗಿ ಇದ್ದರು. ಇವರಿಬ್ಬರಿಗೂ ಎದುರುಮನೆ ಕುಮಾರನ ಜೊತೆ ಸಂಸಾರ ಮಾಡಕ್ಕೆ ಆಸೆ. ದೇವಯ್ಯನೋರು ಕಮಲಿ– ಕುಮಾರನ ಹಳೇ ವಿಳ್ಳೇಶಾಸ್ತ್ರ ಮುರಿದು ಈಗ ಕುಮಾರ-ಕಾಂಗಿಗೆ ಎಂಗೇಜ್‍ಮೆಂಟ್ ಮಾಡಿದ್ರು. ಕಮಲಿ ‘ನಾನು ಆ ಕರಿಕಾಂಗಿಗಿಂತ ಯಾವುದ್ರಲ್ಲಿ ಕಮ್ಮಿ, ಅವಳ ಎಂಗೇಜ್‌ಮೆಂಟು ಎಕ್ಕುಟ್ಟೋಗಲಿ’ ಅಂತ ದಿನಾ ನಟಿಕೆ ಮುರಿಯೋಳು.

ಇವತ್ತು ಬೆಳಗ್ಗೇನೆ ವಠಾರದಲ್ಲಿಡೀ ಗದ್ದಲ. ಯಾರೋ ಕಮಲಿ ಡೈರಿನ ಜರಾಕ್ಸು ಮಾಡ್ಸಿ ಮನೆಮನೇಗೂ ಹಾಕಿದ್ದರು! ಅದರಲ್ಲಿ ಮದುವೆ ಅಲಂಕಾರಕ್ಕೆ 10,000, ಜೆಟ್ಟಳ್ಳಿ ಮಾಮನಿಗೆ, ನೀತಿಗಡ್ಡಪ್ಪನಿಗೆ ತಲಾ 1,500, ರಾಜಣ್ಣನಿಗೆ 1,000, ತಾತನಿಗೆ ಮತ್ತು ಜೋಯಿಸರಿಗೆ ತಲಾ 500, ಊರಿನ ಪಂಚಾಯಿತಿಗೆ 2,500 ಕೊಡಲಾಗಿದೆ. ಮೂಗರ್ಜಿ ಕೊಂಬಲ್ಲ 500 ಇಸುಗಂಡವನೆ. ನಾನು ಕೇರಳದಲ್ಲಿ ಮದುವೆಯಾಗಿದ್ದೆ ಅಂತ ಬರೆದು ಕೆಳಗೆ ಕಮಲಾದೇವಿ ಅಂತ ಸೈನು ಮಾಡಿದ್ದಳು. ನಮಗೇನೂ ಅರ್ಥಾಗಲಿಲ್ಲ!

ಡೈರಿ ಸುಳ್ಳಿನ ಕಂತೆ, ಸುಪನಾತಿ ಕಾಂಗೀದೇ ಹಿಕ್ಮತ್ತು, ಅವಳಿಗೆ ಬರಬಾರದ್ದು ಬಂದು ಚಾಪೆ ಸುತ್ತಿಕೊಂಡೋಗಾ ಅಂತ ಕಮಲಿ ಕಣ್ಣೀರು ಹರಿಸ್ತಿದ್ದಳು. ಚೀಟಿ ಚಿಕ್ಕ, ಬೈರಾ ‘ಇದೆಲ್ಲ ಸುಳ್ಳು, ಕುಹಕ’ ಅಂತ ಬಾಯಿಬಡಕತಿದ್ರು. ಕಾಂಗಿ ಮಳ್ಳಿ ಥರಾ ಕುಂತಿದ್ಲು. ದೇವಜ್ಜ ಮೊಮ್ಮಕ್ಕಳ ಲೆಕ್ಕ ಹಾಕತಿತ್ತು. ಕುಮಾರ ಅವ್ವ-ಅಪ್ಪಚ್ಚಿ ಆಡತಿದ್ದರೆ, ಅವರಣ್ಣ ‘ಕಮಲೀದು ಮೂಲಾ ನಕ್ಷತ್ರ, ಅದಿಕ್ಕೆ ಹಿಂಗಾಯ್ತಾ ಅದೆ’ ಅಂತ ಲೊಚಗರಿದ್ರು.

ADVERTISEMENT

ಕಮಲಿ ಡೈರಿ ದಿಟವೋ ಬದ್ದೋ? ಇದು ಯಾರಿಗೆ ಎಲ್ಲಿ ಸಿಕ್ಕಿತು? ಅವಳು ಖರ್ಚು ಮಾಡಿದ್ದು ಯಾರ ದುಡ್ಡು? ಕ್ಯಾಶಲ್ಲಿ ಕೊಟ್ಲಾ, ಚೆಕ್ಕಲ್ಲಾ? ಅವಳ ಮದುವೆ ಎಲ್ಲಿ, ಯಾವಾಗ, ಯಾರ ಜೊತೆಗೆ ಆಗಿತ್ತು? ಹೊಸ ಮದುವೆ ಟೈಮಲ್ಲಿ ಇದೇನು ಕಿತಾಪತಿ? ಯಾರು ಕೋಡಂಗಿಗಳು ಯಾರು ಈರಭದ್ರರು? ಇವೇ ಹತ್ತು ಪ್ರಶ್ನೆಗಳು ನಮ್ಮ ತಲೆ ತಿಂತಾ ಅವೆ. ನಿಮಗೇನಾದರೂ ಉತ್ತರ ಗೊತ್ತಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.