ADVERTISEMENT

ಕ್ಷೀರ ತುಲಾಭಾರ!

ಸುಮಂಗಲಾ
Published 21 ಏಪ್ರಿಲ್ 2019, 20:00 IST
Last Updated 21 ಏಪ್ರಿಲ್ 2019, 20:00 IST
   

ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಬೆಕ್ಕಣ್ಣ, ನಾನು ವೋಟ್ ಹಾಕಿ ಬರುವಷ್ಟರಲ್ಲಿ ಬಾಗಿಲ ಮುಂದೆ ಕೂತಿತ್ತು. ‘ಎಲ್ಲಿ ಹೋಗಿದ್ಯಲೇ... ತಿರುಗಲಾಡಿ ತಿಪ್ಪ’ ಬೈಯುತ್ತಲೇ ಬಾಗಿಲು ತೆರೆದೆ. ‘ಕೇರಳಕ್ಕೆ ಹೋಗಿದ್ದೆ’ ಮುಗುಮ್ಮಾಗಿ ಹೇಳಿತು.

‘ಪಂಚಕರ್ಮ ಮಾಡಿಸ್ಕೊಳಾಕ ಹೋಗಿದ್ಯೇನಲೇ’ ಚುಡಾಯಿಸಿದೆ. ‘ಅದೆಲ್ಲ ನಿಮಗೆ. ನಾ ಗಾಂಧಾರಿ ಅಮ್ಮ ದೇವಸ್ಥಾನದಲ್ಲಿ ಕ್ಷೀರ ತುಲಾಭಾರ ಮಾಡಿಸ್ಕೊಳಾಕ ಹೋಗಿದ್ದೆ’ ಹುಳ್ಳಗೆ ನಕ್ಕಿತು. ‘ಆ ತರೂರಂಗ ತೆಲಿ ಸರಿ ಇಲ್ಲ,ಮಾಡಿಸ್ಕೊಂಡ ಅಂತ ನೀನೂ ಹೋಗೂದೇನಲೇ... ತಕ್ಕಡಿ ಕೊಂಡಿ ಕಳಚಿಬಿದ್ದು ಅಂವಂಗ ಆದಂಗ ನಿನಗೂ ಆತೇನ್ ಮತ್ತ’ ಗಾಬರಿಯಾದೆ. ‘ಹೇ... ಹಂಗ್ ಕೊಂಡಿ ಬೀಳೂ ಮುಂದ ಅಲ್ಲೇ ಕೂತ್ಗಳಾಕ ನಾಯೇನು ತರೂರ್ ಅಂದ್ಕಂಡೇನು... ಠಣ್ ಅಂತಕೆಳಗೆಜಿಗಿಯೂ ಮಗ ನಾ. ಅಂವಂಗ ತೆಲಿ ಭಯಂಕರ ಸರಿ ಐತಿ ಅಂತ್ಲೇ ಚುನಾವಣೆ ಪ್ರಚಾರಕ್ಕೆ ಮದ್ಲು ತುಲಾ ಭಾರ ಮಾಡಿಸ್ಕೊಳಾಕ ಹೋದ. ಚುನಾವಣೆ ಅಂದ್ರ ಕತ್ತೆ ಕಾಲೂ ನೆಕ್ಕತಾರ. ಅಲ್ಲಿಂದ ಹಂಗೇ ಮಂಡ್ಯಾಕ ಹೋದೆ’.

ಕೆಲ ದಿನಗಳ ಹಿಂದೆ ಪಾಕ್,ಈಗ ಕೇರಳ,ಮಂಡ್ಯ... ನಾನು ಅವಾಕ್ಕಾದೆ.

ADVERTISEMENT

ಕೈಯಲ್ಲಿ ಬೇರೆ ಏನೋ ಮಡಸಿಟ್ಟುಕೊಂಡಿತ್ತು. ‘ಏನ್ ಕಾರಬಾರ ನಡಿಸೀಯಲೇ... ಕೈಯಾಗ ಏನದು’ ಗದರಿದೆ.

‘ಮಂಡ್ಯಾದಾಗ ಹೆಂಗ್ ಪ್ರಚಾರ ನಡಸ್ಯಾರ ಅಂತ ನೋಡಾಕ ಹೋಗಿದ್ದೆ’ ಆಕಳಿಸಿತು. ‘ಅವ್ರು ಹೆಂಗಾರ ಮಾಡ್ಕೊಳ್ಳಲಿ,ಯಾರದೋ ದುಡ್ಡು ಎಲ್ಲಮ್ಮನ ಜಾತ್ರಿ ಮಾಡ್ತಾರ, ನಿಂಗ್ಯಾಕಲೇ...’ ಬೈದೆ. ‘ಮತ್ತ ಈ ಸಲ ಮಾರ್ಜಾಲ ಸಂಘದ ಚುನಾವಣೆಗೆ ನಾನೂ ನಿಲ್ತೀನಿ... ಯಾ ಪಕ್ಷದವ್ರು ಹೆಂಗ ಮಾಡ್ತಾರಂತ ನೋಡಾಕಹೋಗಿದ್ದೆ. ತೆನೆ ಹೊತ್ತ ಮಹಿಳೆ ಪಕ್ಕದಾಗ ಇದನ್ನಿಟ್ಟು ಆಣೆ ಮಾಡಿಸಿ,ರೊಕ್ಕದ ಜೋಡಿಹಂಚತಿದ್ರು. ಮುಂದ ಬೇಕಾಗ್ತದಂತ ನಾನೂ ಒಂದಿಷ್ಟು ತಂದೆ’ ಭಂಡತನದಿಂದ ಹೇಳಿತು. ‘ಇದೂ ಅಂದ್ರೇನು... ತೋರ‍್ಸಲೇ’ ಅಂದರೆ ಕೈಯಲ್ಲಿದ್ದ ಧರ್ಮಸ್ಥಳ ಮಂಜುನಾಥನ ಚಿತ್ರವಿದ್ದ ಕರಪತ್ರಗಳನ್ನುಬಿಡಿಸಿಹಾಸಿಕೊಂಡು ಮಲಗೇಬಿಟ್ಟಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.