ADVERTISEMENT

ಸ್ಪೀಕರ್‌ಗೆ ಮನವಿ

ಬಿ.ಎಂ.ಹನೀಫ್
Published 16 ಜುಲೈ 2019, 20:00 IST
Last Updated 16 ಜುಲೈ 2019, 20:00 IST
Churumur17-07-2019
Churumur17-07-2019   

ಕರುನಾಟಕ ನಿಧಾನಸಭೆಯ ಸನ್ಮಾನ್ಯ ಸ್ಪೀಕರ್‌ ಮಹಾಶಯರೇ,

ನಿಧಾನಸಭೆಯ ಅಧಿವೇಶನಕ್ಕೆಂದು ಬೆಂಗಳೂರಿಗೆ ಹೋದ ನನ್ನ ಪತಿದೇವರು ಒಂದು ವಾರದಿಂದ ಮನೆಗೆ ಬಂದಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದರೆ, ಮರಾಠಿಯಲ್ಲಿ ಯಾರೋ ಹೆಣ್ಣುಮಗಳು ಏನನ್ನೋ ಹೇಳುತ್ತಿದ್ದು, ಇದನ್ನು ಕೇಳಿ ನನ್ನ ಅನುಮಾನ ಹೆಚ್ಚಾಗಿದೆ. ಮುಂಬೈನ ಹೋಟೆಲ್‌ನಲ್ಲಿ ಅವರಿದ್ದಾರೆಂದು ಟೀವಿಯವರು ಹೇಳುತ್ತಿದ್ದಾರೆ. ಒಂದು ಸಲ ಅವರನ್ನು ಟೀವಿಯಲ್ಲಿ ತೋರಿಸಿದಾಗ, ‘ನಾನು ಹಿಂದಿರುಗುವ ಪ್ರಶ್ನೆಯೇ ಇಲ್ಲ, ಯಾರೂ ಇಲ್ಲಿಗೆ ಬರಬೇಡಿ’ ಎಂದು ಅವರು ಹೇಳಿದ್ದನ್ನು ಕೇಳಿ ನನ್ನ ಜಂಘಾಬಲವೇ ಉಡುಗಿಹೋಗಿದೆ.

ಪತ್ರಿಕೆಯವರು, ಟೀವಿಯವರು ಪದೇ ಪದೇ ನನ್ನ ಗಂಡನನ್ನು ಅತೃಪ್ತ ಶಾಸಕ ಎಂದು ಕರೆಯುತ್ತಿದ್ದಾರೆ. ದೇವರಾಣೆ ಹೇಳುತ್ತೇನೆ– ಅವರು ಖಂಡಿತಾ ಅತೃಪ್ತರಲ್ಲ. ಮನೆಯಲ್ಲಿ ಅವರನ್ನು ತುಂಬ ತೃಪ್ತಿಯಿಂದ ನೋಡಿಕೊಂಡಿದ್ದೇನೆ. ನಿಮ್ಮ ನಿಧಾನಸಭೆಗೆ ಆಯ್ಕೆಯಾದ ಬಳಿಕ ಅವರ ಅತೃಪ್ತಿ ಹೆಚ್ಚಾಗಿರಬೇಕು. ವಾಟ್ಸ್‌ಆ್ಯಪ್‌ನಲ್ಲಿ ಅವರ ಬಗ್ಗೆ ಅಲ್ಲಸಲ್ಲದ ವರದಿಗಳೆಲ್ಲ ಬರುತ್ತಿವೆ. ಅವರು ನಿಧಾನಸಭೆಗೆ ರಾಜೀನಾಮೆ ಸಲ್ಲಿಸಿದ್ದಾರಂತೆ. ಅದನ್ನು ಸ್ವೀಕರಿಸಿ ಯೆಸ್‌ ಎನ್ನಲು ನೀವೇಕೆ ನಿಧಾನಿಸುತ್ತಿದ್ದೀರಿ?ಬೆಂಗಳೂರಿನ ನಿಧಾನಸಭೆಗೆ ಬರಲು ಅವರಿಗೆ ಇಷ್ಟವಿಲ್ಲ ಎಂದಾದರೆ, ಮುಂಬೈಯಲ್ಲೇ ನಿಧಾನಸಭೆಗೆ ಹೋಗಲು ಅವರಿಗೆ ಅವಕಾಶ ಮಾಡಿಕೊಡಬಹುದಲ್ಲ? ಹೇಗೂ ನಮ್ಮ ಪ್ರಧಾನಿ ‘ಒಂದು ದೇಶ, ಒಂದು ರೇಷನ್‌ ಕಾರ್ಡ್’ ಜಾರಿಗೆ ತಂದಿದ್ದಾರೆ. ಇಲ್ಲಿಯ ರೇಷನ್‌ ಕಾರ್ಡನ್ನು ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಬಳಸಬಹುದಂತೆ. ಹಾಗೆಯೇ ಇಲ್ಲಿ ಎಮ್ಮೆಲ್ಲೆ ಆದರೆ ದೇಶದ ಯಾವುದೇ ರಾಜ್ಯದ ನಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಅವ ಕಾಶವಿರುವಂತೆ ‘ಒಂದು ದೇಶ, ಒಂದು ಎಮ್ಮೆಲ್ಲೆ’ ಯೋಜನೆಯನ್ನು ಜಾರಿಗೆ ತರಬಹುದಲ್ವೆ?

ADVERTISEMENT

ಸನ್ಮಾನ್ಯ ಸ್ಪೀಕರರೆ, ನಿಗದಿತ ಫಾರ್ಮ್‌ನಲ್ಲಿ ಇಲ್ಲವೆಂದುನನ್ನ ಗಂಡನ ಪತ್ರವನ್ನು ತಿರಸ್ಕರಿಸಿದಂತೆ ಇದನ್ನೂ ತಿರಸ್ಕರಿಸಬೇಡಿ. ಹೆಚ್ಚು ಓದಿಲ್ಲ, ತಿಳಿದಂತೆ ಬರೆದಿದ್ದೇನೆ. ಹೇಗಾದರೂ ನನ್ನ ಪತಿದೇವರು ಮನೆಗೆ ಮರಳುವಂತೆ ಮಾಡಿ.

ಇಂತಿಶಾಸಕರೊಬ್ಬರ ಪತ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.