ADVERTISEMENT

ವಿಧಾನಸಭಾ ಚಾನೆಲ್‌ಗೆ ಸ್ವಾಗತ

churumuri

ಗುರು ಪಿ.ಎಸ್‌
Published 24 ಜುಲೈ 2019, 7:09 IST
Last Updated 24 ಜುಲೈ 2019, 7:09 IST
Churumur24-07-2019
Churumur24-07-2019   

‘ಏರ್ತು... ಏರ್ತು... ಏರ್ತು...’ ಖುಷಿಯಿಂದ ಹೇಳತೊಡಗಿದ ವಿಜಿ. ‘ಏನ್‌ ಏರ್ತು. ಬಿ.ಪಿನಾ ಅಥವಾ ಶುಗರ್‌ ಲೆವೆಲ್ಲಾ?’ ಕಿಚಾಯಿಸಿದ ಮುದ್ದಣ್ಣ. ‘ಕಳೆದ 15 ದಿನಗಳಲ್ಲಿ ಕನ್ನಡ ನ್ಯೂಸ್‌ ಚಾನೆಲ್‌ಗಳ ಟಿಆರ್‌ಪಿ ಏರಿದೆ. ರೇಟಿಂಗ್‌ನಲ್ಲಿ ಎಂಟರ್‌ಟೇನ್‌ಮೆಂಟ್‌ ಚಾನೆಲ್‌ಗಳನ್ನ ನ್ಯೂಸ್‌ ಚಾನೆಲ್‌ಗಳು ಹಿಂದಿಕ್ಕಿವೆ’ ಹೇಳ್ದ ವಿಜಿ. ‘ಆದ್ರೆ, ರಾಜ್ಯದ ಮರ್ಯಾದೆ ಪಾತಾಳಕ್ಕಿಳೀತಲ್ಲ, ಅದಕ್ಕೇನಂತೀರಿ?’.

‘ಕೆಟ್ಟದರಲ್ಲಿಯೂ ಒಳ್ಳೇದನ್ನ ನೋಡಬೇಕು ಮುದ್ದಣ್ಣ. ಟಿಆರ್‌ಪಿ ನೋಡಿ ನಂಗೊಂದು ಐಡಿಯಾ ಬಂದಿದೆ. ‘ಕರ್ನಾಟಕ ವಿಧಾನಸಭಾ ವಾಹಿನಿ’ ಅನ್ನೋ ಚಾನೆಲ್‌ ಶುರುಮಾಡೋಕೆ ಸರ್ಕಾರಕ್ಕೆ ಕೇಳಿಕೊಳ್ತೀನಿ. ಅದರ ಪ್ರಸಾರದ ಹಕ್ಕನ್ನ ನಾನೇ ಪಡೀತೀನಿ. ಕಲಾಪವನ್ನು ಬೇರೆ ಯಾವ ನ್ಯೂಸ್‌ ಚಾನೆಲ್‌ಗಳೂ ಪ್ರಸಾರ ಮಾಡದಂಗೆ ನಿರ್ಬಂಧ ಹಾಕೋಕೆ ಸಲಹೆ ಕೊಡ್ತೀನಿ. ಯಾಕಂದ್ರೆ, ನಮ್ಮ ಸದಸ್ಯರ ಪ್ರದರ್ಶನದ ಲಾಭವನ್ನು ನಾವೇ (ಸರ್ಕಾರ) ತಗೋಬೇಕು ಅನ್ನೋದು ನ್ಯಾಯ ಅಲ್ವಾ’ ಹುಮ್ಮಸ್ಸಿನಲ್ಲಿ ಹೇಳ್ದ ವಿಜಿ. ‘ಟಿಆರ್‌ಪಿ ಬರೋ ದಕ್ಕೆ ಯಾವಾಗಲೂ ಸೆಷನ್‌ ನಡೀಬೇಕಲ್ಲ’ ಉತ್ಸಾಹಕ್ಕೆ ತಣ್ಣೀರೆರಚುವಂತೆ ಹೇಳ್ದ ಮುದ್ದಣ್ಣ.

‘ಸೆಷನ್‌ ಅಷ್ಟೇ ಅಲ್ಲ, ದಿನದ 24 ಗಂಟೆಯೂ ಬೇರೆ ಬೇರೆ ಕಾರ್ಯಕ್ರಮ ಮಾಡ್ತೀವಿ. ವಿಧಾನಸಭಾ ಸದಸ್ಯರೇ ಚಾನೆಲ್‌ನ ಜೀವಾಳ. ಅವರು ಕಚೇರಿ ಮತ್ತು ಮನೆ ಹೊರತುಪಡಿಸಿ ಬೇರೆ ಎಲ್ಲೇ ವಾಸ್ತವ್ಯ ಹೂಡಿದರೂ ಅದರ ನೇರಪ್ರಸಾರ ಮಾಡ್ತೀವಿ. ಇನ್ನು, ರೆಸಾರ್ಟ್‌ ಮಾಲೀಕರು ಮತ್ತು ಖಾಸಗಿ ಹೆಲಿಕಾಪ್ಟರ್‌ ಕಂಪನಿ ಓನರ್‌ಗಳೇ ನಮ್‌ ಚಾನೆಲ್‌ನ ಜಾಹೀರಾತುದಾರರು. ಅವರ ಲಾಭ–ಅನುಕೂಲಗಳು ನಮ್ಮ ಸದಸ್ಯರನ್ನೇ ಅವಲಂಬಿಸಿರೋದ್ರಿಂದ ಜಾಹೀರಾತು ಕೊಟ್ಟೇ ಕೊಡ್ತಾರೆ’ ವಿಶ್ವಾಸದಿಂದ ಹೇಳ್ದ ವಿಜಿ.

ADVERTISEMENT

‘ನಿಮ್ಮ ಚಾನೆಲ್‌ಗೆ ಟಿಆರ್‌ಪಿ ಬಾರದಿದ್ದರೆ...?’

‘ಸರ್ಕಾರದಿಂದಲೇ ಅಧಿಕೃತವಾಗಿ ‘ಆಪರೇಷನ್‌’, ಅದರ ನೇರಪ್ರಸಾರ ನಮ್ಮಲ್ಲಿ ಮಾತ್ರ ಅಂದ್ರೆ, ಬಿದ್ದಿರೋ ಟಿಆರ್‌ಪಿ ಮುಗಿಲು ಮುಟ್ಟದಿದ್ದರೆ ಕೇಳು’ ತಣ್ಣಗೆ ಹೇಳ್ದ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.