ADVERTISEMENT

ಮುರಿಯದ ದಾಖಲೆ

ಮಣ್ಣೆ ರಾಜು
Published 22 ಅಕ್ಟೋಬರ್ 2019, 18:40 IST
Last Updated 22 ಅಕ್ಟೋಬರ್ 2019, 18:40 IST
   

ಟಿ.ವಿಯ ಲೈವ್ ಪ್ರೋಗ್ರಾಂನಲ್ಲಿ ಸುಮಿ, ಗುರೂಜಿಗೆ ಫೋನ್ ಮಾಡಿ ಕಷ್ಟ ಹೇಳಿಕೊಂಡಳು.

‘ಗುರೂಜಿ, ನನ್ನ ಮಗ ಸ್ಕೂಲ್ ಟೆಸ್ಟ್‌ನಲ್ಲಿ ಜಿಲ್ಲೆಗಳ ಸಂಖ್ಯೆ ಪ್ರಶ್ನೆಗೆ ತಪ್ಪು ಉತ್ತರ ಬರೆದು ಎರಡು ಮಾರ್ಕ್ಸ್‌ ಕಮ್ಮಿ ತೊಗೊಂಡಿದ್ದ’ ಅಂದಳು.

‘ಎಲ್ಲಾ ಕಡೆ ಜಿಲ್ಲೆಗಳ ವಿಭಜನೆ ಹೋರಾಟ ಶುರುವಾಗಿ ಜಿಲ್ಲೆಗಳ ಸಂಖ್ಯೆ ಬಗ್ಗೆ ದೊಡ್ಡವರಿಗೇ ಗೊಂದಲ ಆಗಿದೆ, ನಿಮ್ಮ ಮಗನಿಗೆ ಆಗದಿರುತ್ತಾ’ ಅಂದ್ರು ಗುರೂಜಿ.

ADVERTISEMENT

‘ಇದಕ್ಕೆ ಪರಿಹಾರವೇನು ಗುರೂಜಿ?’

‘ಜಿಲ್ಲೆಗಳ ಹೆಸರನ್ನು ಹಂಡ್ರಡ್ ಟೈಮ್ಸ್ ಬರೆಸಿ, ಸಮಸ್ಯೆ ಪರಿಹಾರವಾಗುತ್ತೆ’.

‘ಥ್ಯಾಂಕ್ಯೂ ಗುರೂಜಿ. ಒಡವೆ ಖರೀದಿಸಲು ಈಗ ಟೈಮ್ ಚೆನ್ನಾಗಿದೆಯೇ ಗುರೂಜಿ?’

‘ಬೇಡವೇ ಬೇಡ, ಮಹಿಳೆಯರು ಚಿನ್ನ ಕೊಳ್ಳುವ ಸಂಪ್ರದಾಯ ಮುರಿಯಬೇಕು. ಚಿನ್ನ ಬೇಕೇಬೇಕು ಅನಿಸಿದರೆ ಪದವಿ ಪಡೆದು, ಕ್ರೀಡೆಯಲ್ಲಿ ಗೆದ್ದು ಚಿನ್ನದ ಪದಕ ಪಡೆಯಿರಿ’.

‘ರೋಹಿತ್ ಶರ್ಮಾನಂತೆ ತಾನೂ ರೆಕಾರ್ಡ್ ಮರಿಯುತ್ತೇನೆ ಎಂದು ಕ್ರಿಕೆಟ್ ಆಡಲು ಹೋಗಿ ಮಗ ಹಲ್ಲು ಮುರಿದುಕೊಂಡು ಬಂದ’.

‘ರೋಹಿತ್ ಶರ್ಮಾ ಬ್ಯಾಟ್ ಮುರಿಯೋವರೆಗೂ ದಾಖಲೆ ಮುರಿಯುತ್ತಲೇ ಇರುತ್ತಾನೆ. ನಿಮ್ಮ ಮಗನಿಗೆ ಒಳ್ಳೆ ಭವಿಷ್ಯವಿದೆ, ಮುಂದೆ ಏನನ್ನಾದರೂ ಮುರಿಯುತ್ತಾನೆ’.

‘ನನ್ನ ಮಗ ದೊಡ್ಡದೊಂದು ದಾಖಲೆ ಮುರಿಯುವಂತೆ ಆಶೀರ್ವಾದ ಮಾಡಿ ಗುರೂಜಿ’.

‘ಹೈ ಜಂಪ್, ಲಾಂಗ್ ಜಂಪ್‍ನಲ್ಲಿ ಯಾರೂ ಮುರಿಯದ ದಾಖಲೆ ಇದೆ, ಅದನ್ನ ನಿಮ್ಮ ಮಗ ಮುರಿಯುತ್ತಾನಾ?’ ಕೇಳಿದರು ಗುರೂಜಿ.

‘ಅಷ್ಟು ಉದ್ದ, ಅಷ್ಟು ಎತ್ತರ ಹಾರಿದ ದಾಖಲೆ ಯಾವುದು ಹೇಳಿ ಗುರೂಜಿ,
ಮಗನಿಗೆ ಮುರಿಯಲು ಹೇಳುತ್ತೇನೆ’ ಸುಮಿಗೆ ಕುತೂಹಲ.

‘ಆಂಜನೇಯ ಲಂಕೆಗೆ ಸಮುದ್ರ ಹಾರಿದ ದಾಖಲೆಯನ್ನು ಇನ್ನೂ ಯಾರೂ ಮುರಿದಿಲ್ಲ, ನಿಮ್ಮ ಮಗ...’

ಗುರೂಜಿ ಮಾತು ಮುಗಿಯುವ ಮೊದಲೇ ಸುಮಿ ಫೋನ್ ಕಟ್ ಮಾಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.