ADVERTISEMENT

ಬೆಕ್ಕಣ್ಣನ ದೀಪಾವಳಿ

ಸುಮಂಗಲಾ
Published 28 ಅಕ್ಟೋಬರ್ 2019, 19:36 IST
Last Updated 28 ಅಕ್ಟೋಬರ್ 2019, 19:36 IST
29-10-2019 Churumuri
29-10-2019 Churumuri   

ನಾಕಾರು ದಿನದಿಂದ ನಾಪತ್ತೆಯಾಗಿದ್ದ ಬೆಕ್ಕಣ್ಣ ಬೆಳಗ್ಗೆ ಆಕಳಿಸುತ್ತ ಬಂದಿತು. ‘ಎಲ್ಲಿ ಹೋಗಿದ್ಯಲೇ... ಬೇಕಾದಾಗ ಬರೂದು, ಬ್ಯಾಡಾದಾಗ ಹೋಗಾಕ ನೀಯೇನ್ ಅತೃಪ್ತ ಶಾಸಕ ಆಗೀಯೇನು? ಮಥುರಾದಾಗ ‘ಯಮ ದ್ವಿತೀಯ’ ಆಚರಣೆಯಂತ, ಯಮುನಾ ನದಿ ಯಾಗ ಮುಳುಗೆದ್ದರೆ ಪುಣ್ಯ ಬರ್ತದಂತ ಹೋಗಿ ದ್ಯೇನ್ ಮತ್ತ’ ಎಂದು ಜಬರಿಸಿದೆ. ‘ನದೀ ಕೊಳಕು ನೋಡಿದರೆ ‘ಯಮ ದ್ವಿತೀಯ’ ಅಲ್ಲ, ‘ಯಮ ಪ್ರಥಮ ಚುಂಬನ’ ಆಗೂದು ಗ್ಯಾರಂಟಿ, ನಾ ಎದಕ್ಕ ಹೋಗಲಿ’ ಎಂದು ಮೂತಿ ಉಬ್ಬಿಸಿತು.

‘ಬಂಡೆ ಮಾಮಾ ವಿಮಾನ ನಿಲ್ದಾಣದಿಂದ ಬರಬೇಕಿದ್ರೆ ಭಾರೀ ಮೆರವಣಿಗೆ ಅಂತ, ದಳದ ಬಾವುಟ ಹಿಡ್ಕಂಡು ಕೈ ಬೀಸಿದನಂತ, ಅಲ್ಲಿಗೆ ಹೋಗಿದ್ಯೇನಲೇ...’

‘ಅಂವ ಇ.ಡಿ. ಸರ್ಜಿಕಲ್ ಸ್ಟ್ರೈಕ್ ಯುದ್ಧ ದಾಗ ಗೆದ್ದು ಬಂದಾನಂತ ಜೈಕಾರ ಹಾಕಕ್ಕ ಹೋಗೂದ್ ಬಿಟ್ ಬ್ಯಾರೆ ದಗದಿಲ್ಲೇನ್ ನನಗ’ ಎಂದು ತುಟಿ ಕೊಂಕಿಸಿತು.

ADVERTISEMENT

‘ಕುಮಾರಣ್ಣ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ಕಮಲಕ್ಕನ ಮನಿ ಕೀಲಿಕೈ ಸಂತೋಷಣ್ಣನ ಹತ್ರ ಅಷ್ಟೇ ಅಲ್ಲ, ನನ್ನ ಹತ್ರನೂ ಐತೆ’ ಅಂತ ಬೆಳಗಾವಿದಾಗ ಹಾಡಾಕ ಹತ್ತಿದ್ದ, ಅಲ್ಲಿಗೇ ಹೋಗಿದ್ಯೇನು’ ನಾನು ಪಟ್ಟುಬಿಡದೆ ಕೇಳಿದೆ.

‘ಕಾಶ್ಮೀರದ ರೋಜೋರಿಗೆ ಹೋಗಿದ್ನಿ. ಮೋದಿ ಮಾಮಾ, ನಾನು ನಮ್ಮ ಸೈನಿಕರ ಜೋಡಿ ದೀಪಾವಳಿ ಆಚರಿಸಿದ್ವಿ. ಟಿ.ವಿವಳಗ ಮಾಮಾನ ಜೋಡಿ ನನ್ನೂ ತೋರಿಸಿದ್ರು, ನೋಡಿಲ್ಲಿ’ ಮೋದಿ ಮಾಮನ ಜೊತೆಗಿನ ಸೆಲ್ಫಿ ತೋರಿಸಿತು. ‘ಇಲ್ಲಿ ಪ್ರವಾಹದಾಗ ಹೊಲ ಮನಿ ಕಳಕಂಡವ್ರಿಗಿ ಇನ್ನಾ ಪರಿಹಾರ ಕೊಟ್ಟಿಲ್ಲ, ಅವ್ರಿಗಿ ಸರಿಯಾಗಿ ಹೊಟ್ಟಿಗೂ ಇಲ್ಲಂತ. ಸಂತ್ರಸ್ತ ಕೇಂದ್ರಕ್ಕೆ ಹೋಗಿ ಹೆಗ್ಗಣ ಹಿಡಿದು ದೀಪಾವಳಿ ಮಾಡೂದು ಬಿಟ್ಟು ಸೆಲ್ಫಿ ತೆಕ್ಕೊಳ್ಳಾಕ ಹೋಗೀಯಲ್ಲ, ಬುದ್ಧಿ ಎಲ್ಲಿಟ್ಟಿದ್ದಿ’ ಬೈದೆ.

ಸೆಲ್ಫಿ ನೋಡಿ ‘ಭಪ್ಪರೆ ಮಗನೆ...’ ಎಂದು ಭಕ್ತೆಯಂತೆ ಹೊಗಳುವೆ ಎಂದುಕೊಂಡಿದ್ದ ಬೆಕ್ಕಣ್ಣನಿಗೆ ಬೈಗುಳದಿಂದ ಬೇಜಾರಾದರೂ ತೋರಿಸಿಕೊಳ್ಳದೆ, ‘ಎಷ್ಟರ ಚಿಲ್ರೆ ವಿಚಾರ ಮಾಡ್ತೀಯವ್ವಾ, ವಿಶನ್ ದೊಡ್ಡದಿರಬಕು’ ಎಂದು ಮೀಸೆ ತಿರುವಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.