ADVERTISEMENT

ಚುರುಮುರಿ: ಗಾಳಿಯಲ್ಲಿ ಗುಂಡು

ಸುಮಂಗಲಾ
Published 9 ಅಕ್ಟೋಬರ್ 2022, 19:30 IST
Last Updated 9 ಅಕ್ಟೋಬರ್ 2022, 19:30 IST
ಚುರುಮುರಿ
ಚುರುಮುರಿ   

‘ನನಗೊಂದು ಪಿಸ್ತೂಲ್ ಕೊಡಿಸು’ ಎಂದು ಬೆಕ್ಕಣ್ಣ ಪೀಡಿಸುತ್ತಿತ್ತು. ಕೇಪು ಪಟಾಕಿ ಹೊಡೆ ಯುವ ಪಿಸ್ತೂಲ್ ಕೇಳುತ್ತಿದೆ ಎಂದುಕೊಂಡೆ.

‘ಅಲ್ಲಲೇ... ದೀಪಾವಳಿ ಇನ್ನಾ ದೂರ ಐತಿ. ಈಗ್ಲೇ ಪಿಸ್ತೂಲು ಯಾಕೆ...’ ಎಂದು ಬೈಯ್ದೆ.

‘ಆ ಪಿಸ್ತೂಲ್ ಅಲ್ಲ. ಖರೇ ಖರೇ ಪಿಸ್ತೂಲು. ಆಯುಧಪೂಜೆ ದಿನ ಸುಮ್ಮನೇ ಚಾಕುಗೀಕು ಪೂಜೆ ಮಾಡಬ್ಯಾಡ್ರಿ, ಶಸ್ತ್ರಗಳನ್ನು ಪೂಜೆ ಮಾಡ್ರಿ, ಮತ್ತ ಎಲ್ಲಾ ಥರದ ಶಸ್ತ್ರಗಳನ್ನು ಬಳಸಾಕೂ ಕಲೀರಿ ಅಂತ ವಿಹಿಂಪ ಕಾರ್ಯದರ್ಶಿಯೊಬ್ಬರು ಹೇಳ್ಯಾರ’ ಸುದ್ದಿಯನ್ನು ತೋರಿಸಿತು.

ADVERTISEMENT

‘ಈಗ ಆಯುಧಪೂಜೆ ಮುಗೀತಲ್ಲ, ಮುಂದಿನ ವರ್ಸ ನೋಡೂಣೇಳು’ ಎಂದು ಬಾಯಿ ಮುಚ್ಚಿಸಿದೆ. ‘ಈಶೂ ಮಾಮ ‘ನನ್ನೂ ಆಟಕ್ಕೆ ಸೇರಿಸಿಕೊಳ್ರೋ’ ಅಂತ ಎಷ್ಟು ಕೇಳಿಕೆಂಡ್ರೂ ಮುಂದಿನ ಸಲ ಚುನಾವಣೆ ಮುಗಿದ ಮ್ಯಾಗೆ ನೋಡೂಣೇಳು ಅಂತ ಕಮಲಕ್ಕನ ಮನಿವಳಗಿರೋ ದೊಡ್ಡೋರೆಲ್ಲ ಹೇಳ್ಯಾರಂತ... ನೀನೂ ಹಂಗ ಕೇಳಿದ್ದ ಕ್ಕೆಲ್ಲ ಮುಂದಿನ ವರ್ಸ ಅಂತಿ’ ಎಂದು ಮುಖವುಬ್ಬಿಸಿತು.

‘ಅದಕ್ಕ ಇದಕ್ಕ ವ್ಯತ್ಯಾಸ ಐತಲೇ’ ಸಮಾಧಾನಿಸಲು ನೋಡಿದೆ.

‘ಅದನ್ನೇ ಈಶೂ ಮಾಮ ಹೇಳ್ಯಾನ. ಬ್ಯಾರೆ ಥರದ ಕೇಸುಗಳಿಗೆ, ತನ್ನ ಮ್ಯಾಗೆ ಬಂದಿದ್ದ ಕೇಸಿಗೆ ವ್ಯತ್ಯಾಸ ಐತಿ, ಈಗ ಕೋರ್ಟ್ ತನಗ ಕ್ಲೀನ್ ಚಿಟ್ ಕೊಟ್ಟೈತಿ ಅಂದಾನ’.

‘ಭಾರತ್ ಜೋಡೊ ಯಾತ್ರೆಯನ್ನ ಮುರಿಯೂದು ಹೆಂಗೆ ಅನ್ನೂ ಚಿಂತಿವಳಗ ಕಮಲಕ್ಕನ ಮನಿ ದೊಡ್ಡೋರು ಇದ್ದರ, ನಿಮ್ಮ ಈಶೂ ಮಾಮಗ ಕುರ್ಚಿ ಚಿಂತಿ ಆಗೈತಿ. ಅದಿರ್‍ಲಿ, ಸುದ್ದಿ ಕೇಳೀಯೇನು... ಭೂತಾನ್ ದೇಶದಿಂದ ಕನಿಷ್ಠ ಆಮದು ಧಾರಣೇನೂ ಇಲ್ಲದೆ ಅಡಕೆ ಆಮದಿಗೆ ಹಸಿರು ನಿಶಾನೆ ತೋರಿಸ್ಯಾರ. ಹಿಂಗಾದರ ನಮ್ಮ ಅಡಕೆ ಬೆಳೆಗಾರರ ಗತಿಯೇನು? ಡಬಲ್ ಎಂಜಿನ್ ಸರ್ಕಾರ ಇದ್ರೂ ನಮ್ಮ ಬೆಳೆಗಾರರ ಬಾಳು ಮೂರಾಬಟ್ಟೆ’.

‘ಅಡಕೆ ಆಮದು ಮಾಡಿಕೆಂಡು, ಗುಟ್ಕಾ, ಪಾನ್ ಮಸಾಲಾ ರಫ್ತು ಮಾಡೂಣು. ಅಡಕೆಯಲ್ಲಿ ಹೋದ ಮಾನ ಗುಟ್ಕಾದಾಗೆ ಬರತೈತೇಳು’ ಬೆಕ್ಕಣ್ಣ ಪಿಸ್ತೂಲಿಲ್ಲದೆಯೇ ಗಾಳಿಯಲ್ಲಿ ಗುಂಡು ಹೊಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.