ADVERTISEMENT

ಚುರುಮುರಿ | ಶಡ್ಡುಕ ಪುರಾಣ

ಲಿಂಗರಾಜು ಡಿ.ಎಸ್
Published 21 ಜೂನ್ 2021, 19:59 IST
Last Updated 21 ಜೂನ್ 2021, 19:59 IST
Churumuri 22-06-2021.jpg
Churumuri 22-06-2021.jpg   

ತುರೇಮಣೆ ಮನೇಲಿ ಒಂದು ಅಸ್ಸಾಮ್ ಪ್ಯಾಮಿಲಿ ಕೆಲಸ ಮಾಡಿಕ್ಯಂಡು ಇತ್ತು.

‘ಅವರ್‍ಯಾರು ಸಾ?’ ಅಂತ ಕೇಳಿದ್ದುಕ್ಕೆ ‘ನಮ್ಮ ಶಡ್ಡುಕ, ಅವನ ಪ್ಯಾಮಿಲಿ ಕನೋ’ ಅಂದಿದ್ರು. ಅಸ್ಸಾಮಿನೋನಿಗೆ ನಾದಿನಿ ಕೊಟ್ಟು ಮದುವೆ ಮಾಡ್ಯವುರಲ್ಲಾ ಅಂತ ಭಾರೀ ಖುಷಿಯಾಗಿತ್ತು. ಆದ್ರೂ ಶಡ್ಡುಕನ ಕೈಲಿ ಮನೆ ಕೆಲಸ ಮಾಡಿಸ್ತಾವ್ರೆ ಅಂತ ಬೇಜಾರೂ ಆಗಿತ್ತು.

ನೆನ್ನೆ ತುರೇಮಣೆ ಶಡ್ಡುಕನ ಪ್ಯಾಮಿಲಿ ಭಿನ್ನಮತೀಯ ಶಾಸಕರ ಥರಾ ಮುಖ ಇಳಿಬುಟ್ಕಂದು ರೈಲ್ವೇ ಟೇಶನ್ ಕಡಿಕೆ ಹೋಯ್ತಾ ಇತ್ತು.

ADVERTISEMENT

‘ಎಲ್ಲೋಯ್ತಿದಿರಿ?’ ಅಂತ ಕೇಳಿದೆ. ‘ಸಾಬ್, ಹಂಕೋ ಘರ್‍ಸೆ ನಿಕಾಲ್ದಿಯಾ! ಗೌಹಾತಿ ಜಾನಾ. ಪೈಸಾ ನೈಹೈ’ ಅಂದ ಬೇಜಾರಲ್ಲಿ. ಪಾಪದೋರನ್ನ ಹಿಂಗೆ ಆಚಿಗಾಕ್ಯವುರಲ್ಲಾ ಅನ್ನಿಸಿ ಜೇಬಲ್ಲಿದ್ದ 5,000 ರೂಪಾಯಿ ದುಡ್ಡು ಕೊಟ್ಟು ಮಾತಾಡಿ ಕಳಿಸಿ ತುರೇಮಣೆ ಮನೆಗೆ ಬಂದೆ.

‘ಅಲ್ಲಾ ಸಾ, ನಿಮ್ಮ ಶಡ್ಡುಕನ್ನ ಮನೆ ಬಿಟ್ಟು ಓಡಿಸಿದ್ದೀರಲ್ಲಾ? ನಿಮ್ಮ ನಾದಿನಿ ಸಂಸಾರದ ಕಥೆ ಯಂಗೇ?’ ಅಂತ ಕೇಳಿದೆ. ತುರೇಮಣೆ ಜೈಲ್ ಸ್ವಾಮಿ ಫೋನ್‌ಕಾಲ್ ಬಂದೋರಂಗೆ ಕಕ್ಕಾಬಿಕ್ಕಿಯಾಗೋದ್ರು!

‘ಲೋ ಬೊಡ್ಡಿಹೈದ್ನೆ, ಯಾರ‍್ಲಾ ನಾದಿನಿ ಗಂಡ? ನಮ್ಮಾವುನಿಗೆ ನನ್ನೆಂಡ್ರು ಒಬ್ಬಳೆ ಮಗಳು ಕನೋ!’ ಅಂದಾಗ ಸೈನಿಕನ ಥರ ಕನ್‍ಪ್ಯೂಸಾಗೋ ಪರಿಸ್ಥಿತಿ ನಂದಾಗಿತ್ತು.

‘ಅಲ್ಲಾ ಸಾ, ಆವತ್ತು ನೀವೇ ಅಂದಿದ್ರಿ, ಅಸ್ಸಾಮಿನೋನು ನನ್ನ ಶಡ್ಡುಕ ಅಂತ. ಶಡ್ಡುಕ ಅಂದ್ರೆ ನಾದಿನಿ ಗಂಡ ಅಲ್ಲುವರಾ?’ ಅಂದೆ.

‘ಥೂ ನನ ಮಕ್ಕಳ, ನೆಟ್ಟಗೆ ಕನ್ನಡವೂ ಬರಲ್ಲವಲ್ರೋ ನಿಮಗೆ. ಅವನು ಲಾಕ್‍ಡೌನ್ ಟೈಮಲ್ಲಿ ತಟಸ್ಥ ಬಣದ ಶಾಸಕರ ಥರಾ ಅಬ್ಬೇಪಾರಿಯಂಗೆ ನಿಂತಿದ್ದ. ಪಾಪ ಅಂತ ಕರಕಬಂದು ಶೆಡ್ಡಲ್ಲಿ ಜಾಗ ಕೊಟ್ಟಿದ್ದೆ. ಶಡ್ಡುಕ ಅಂದ್ರೆ ಕಾರ್ ಶೆಡ್ಡಲ್ಲಿ ಇರೋನು ಅಂತ ಕನ್ರೋ’ ಅಂದಾಗ ನಗಬೇಕೋ ಅಳಬೇಕೋ ಗೊತ್ತಾಗ್ನಿಲ್ಲ. ಅನ್ನಂಗಿಲ್ಲ ಆಡಂಗಿಲ್ಲ 5,000 ಪುಗಸಟ್ಟೆ ಪುನುಗಾಗೋಗಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.