ADVERTISEMENT

ಚುರುಮುರಿ | ಇ.ಡಿ. ಲೇಡಿ!

ಬಿ.ಎನ್.ಮಲ್ಲೇಶ್
Published 17 ಜೂನ್ 2022, 20:22 IST
Last Updated 17 ಜೂನ್ 2022, 20:22 IST
   

‘ಲೇ ತೆಪರ, ಈ ಇ.ಡಿ. ಅಂದ್ರೆ ಏನ್ಲೆ?’

‘ಅದಾ... ಅರ್ಥ ಅದ್ರಾಗೇ ಐತಲ್ಲ, ಇ.ಡಿ. ಅಂದ್ರೆ ಹಿಡ್ಕಳಾದು ಅಂತ...’

‘ಅಲ್ಲ ಪೇಪರ್‌ನಾಗೆ ಅದೇನೋ ಜಾರಿ ಗೀರಿ ಅಂತ ಇತ್ತಪ, ಅದ್ಕೆ ಕೇಳಿದೆ’.

ADVERTISEMENT

‘ಅದೇ ಕಣಲೆ, ಸೆಂಟ್ರಲ್‌ನೋರು ಯಾರನ್ನ ಹಿಡ್ಕಳಿ ಅಂತ ಆದೇಶ ಜಾರಿ ಮಾಡ್ತಾರೋ ಅವರನ್ನ ಬಿಗಿಯಾಗಿ ಹಿಡ್ಕಳೋದು’.

‘ಓ... ಹಂಗಾ? ಅವ್ರು ನಮ್ ಪೊಲೀಸ್ರಿಗಿಂತ ಬಿಗಿನಾ?’

‘ಬಿಗಿನಾ? ಅವ್ರು ಒಂದ್ಸಲ ಹಿಡ್ಕಂಡ್ರೆ ಮುಗೀತು, ಪತ್ರಗುಟ್ಟಿಸಿಬಿಡ್ತಾರೆ’.

‘ಹೌದಾ? ಅಂದ್ರೆ ಬೆಂಡೆತ್ತಿ ಬಾಯಿ ಬಿಡಿಸ್ತಾರಾ? ಏರೋಪ್ಲೇನ್ ಹತ್ತಿಸ್ತಾರಾ?’

‘ಅದೆಲ್ಲ ಇಲ್ಲ, ಆದ್ರೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಚಪಾಟೆಬ್ಬಿಸಿಬಿಡ್ತಾರೆ... ಮೆಂಟ್ಲು ಮಾಡಿಬಿಡ್ತಾರೆ. ಒಂದ್ಸಲ ಸಿಗಾಕ್ಕಂಡ್ರೆ ಲೈಫ್ ಮುಗೀತು ಅಂತ ಅರ್ಥ. ನೀನು ದುಡಿದಿದ್ದು, ಹೊಡೆದಿದ್ದು ಎಲ್ಲ ಕಿತ್ಕಂಡು ಬರ್ಬಾದ್ ಮಾಡಿ ಜೈಲಿಗೆ ಹಾಕಿಬಿಡ್ತಾರೆ...’

‘ಅಲೆ ಇವ್ನ, ಅಷ್ಟೆಲ್ಲ ಪವರ್ ಐತಾ ಅವರಿಗೆ?’

‘ಹ್ಞೂಂ ಮಾರಾಯ, ಯಾರಿಗೆ ಸಿಕ್ರೂ ಅವರ ಕೈಯಾಗೆ ಮಾತ್ರ ಸಿಗಾಕ್ಕಾಬಾರ್ದು’.

‘ಅಲ್ಲ ನಿಂಗೆ ಇವೆಲ್ಲ ಹೆಂಗ್ ಗೊತ್ತಾಗ್ತವಲೆ?’

‘ಹೆಂಗೆ ಅಂದ್ರೆ? ನಾನು ಅಂಥೋರ ಕೈಗೆ ಸಿಗಾಕ್ಕಂಡು ಇವತ್ತಿಗೆ ಇಪ್ಪತ್ತು ವರ್ಷಾತು, ಇನ್ನೂ ಬಿಡುಗಡೆ ಇಲ್ಲ...’

‘ಅಂದ್ರೆ?’

‘ಅಂದ್ರೇ ಮದುವೇಲಿ ಅರೆಸ್ಟಾಗಿ ಹೆಂಡ್ತಿ ಅನ್ನೋ ಇ.ಡಿ. ಲೇಡಿ ಕೈಯಲ್ಲಿ ಬೇಡಿ ಹಾಕಿಸ್ಕಂಡು ಇಪ್ಪತ್ತು ವರ್ಷಾತು ಅಂದೆ. ಆದ್ರೆ ಒಂದು ವ್ಯತ್ಯಾಸ...’

‘ಏನು?’

‘ಇ.ಡಿ.ಯೋರು ಮೊದ್ಲು ಪ್ರಶ್ನೆ ಕೇಳಿ ಆಮೇಲೆ ಜೈಲಿಗಾಕ್ತಾರೆ, ಆದ್ರೆ ಹೆಂಡ್ತಿದೀರು ಮೊದ್ಲು ಸಂಸಾರ ಅನ್ನೋ ಜೈಲಿಗೆ ಹಾಕ್ಕಂಡು ಆಮೇಲೆ ಪ್ರಶ್ನೆ ಕೇಳೋಕೆ ಶುರು ಮಾಡ್ತಾರೆ...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.