ADVERTISEMENT

ಚುರುಮುರಿ | ಕೊಬ್ಬು ಕರಗಿಸಿದರೆ ಕಾಸು!

ಸುಮಂಗಲಾ
Published 12 ಜೂನ್ 2022, 20:24 IST
Last Updated 12 ಜೂನ್ 2022, 20:24 IST
ಚುರುಮುರಿ
ಚುರುಮುರಿ   

‘ಏ ನೋಡಿಲ್ಲಿ... ಒಂದು ಕೆ.ಜಿ. ತೂಕ ಇಳಿಸಿಕಂಡ್ರೆ 1,000 ಕೋಟಿ ರೂಪಾಯಿ ಕೊಡ್ತೀನಂತ ಗಡ್ಕರಿ ಮಾಮಾ ಹೇಳ್ಯಾನ... ಲಗೂನೆ ಒಂದ್ ಹತ್ ಕೆ.ಜಿ. ತೂಕ ಇಳಿಸು, ಎಷ್ಟ್ ರೊಕ್ಕ ಬರತೈತಿ’ ಪೇಪರು ಕೈಯಲ್ಲಿ ಹಿಡಿದ ಬೆಕ್ಕಣ್ಣ ಒಂದೇ ಉಸುರಿಗೆ ವದರಿತು.

ಪೂರ್ಣ ಸುದ್ದಿ ಓದಿದ ನನಗೆ ನಗು ತಡೆಯಲಾಗಲಿಲ್ಲ. ‘ಹುಚ್ ಪ್ಯಾಲಿ... ಒಂದ್ ಕೆ.ಜಿ. ತೂಕ ಇಳಿಸಿದರ 1,000 ಕೋಟಿ ರೂಪಾಯಿ ಕೊಡ್ತೀನಂತ ಗಡ್ಕರಿ ಮಾಮಾ ಹೇಳಿದ್ದು ಉಜ್ಜೈನಿ ಸಂಸದ ಫಿರೋಜಿಯಾಗೆ ಕಣಲೇ. ಫಿರೋಜಿಯಾ 125 ಕೆ.ಜಿ. ಇದ್ದರಂತ, ಅದಕ್ಕ ನೀ ಹೆಚ್ಚಿನ ಕೊಬ್ಬು ಕರಗಿಸಿದರ ಕ್ಷೇತ್ರದ ಅಭಿವೃದ್ಧಿಗೆ ರೊಕ್ಕ ಕೊಡ್ತೀನಂತ ಆಸೆ ಹುಟ್ಟಿಸ್ಯಾರೆ. ಅದೇನ್ ಮನಿಖರ್ಚಿಗೆ ಕೊಡ್ತಾರಂತ ಮಾಡೀಯೇನ್’.

ವಿವರಣೆ ಕೇಳಿ ತಲೆದೂಗಿದ ಬೆಕ್ಕಣ್ಣ, ‘ನೋಡ್... ನಮ್ಮ ಗಡ್ಕರಿ ಮಾಮಾ ಎಷ್ಟ್ ಬೆರಕಿ ಅದಾನ. ಕೊಬ್ಬು ಕರಗಿಸಿದರ ಕ್ಷೇತ್ರಾಭಿವೃದ್ಧಿಗೆ ಕಾಸು... ವ್ಹಾವ್’ ಎಂದು ಹೊಗಳಿತು.

ADVERTISEMENT

‘ಅಲ್ಲಿ ಪರ್ಸೆಂಟೇಜ್ ವ್ಯವಹಾರ ಹೆಂಗೈತಿ ಗೊತ್ತಿಲ್ಲ. 1,000 ಕೋಟಿ ರೂಪಾಯಿಗೆ ಮೂವತ್ತು, ನಲ್ವತ್ತು ಪರ್ಸೆಂಟೇಜ್ ಸೇರಿಸಿ ಕೊಡ್ತೀರೇನು ಅಂತ ಗಡ್ಕರಿ ಮಾಮಾಗೆ ಕೇಳು’ ನಾನು ಕಿಚಾಯಿಸಿದೆ.

‘ನಮ್ಮ ಕರುನಾಡಿನ ಸಂಸದರಿಗೆ ಈ ಥರಾ ಕರಾರು ಇಟ್ಟು ಕ್ಷೇತ್ರದ ಅಭಿವೃದ್ಧಿ ಮಾಡ್ರಿ ಅಂದರ ಹೆಂಗಿರತೈತಿ?’ ಬೆಕ್ಕಣ್ಣ ಕನಸು ಕಾಣತೊಡಗಿತು.

‘ಕೊಬ್ಬು ಕರಗಿಸ್ರೀ ಅನ್ನೂದರ ಬದಲಿಗೆ ನಾಲಿಗೆ ಬಿಗಿಹಿಡಿದರ ಅಭಿವೃದ್ಧಿಗೆ ಕಾಸು ಅಂತ ಎಲ್ಲಾ ಪಕ್ಷಗಳ ನಾಲಿಗೆವೀರ ಸಂಸದರು, ಶಾಸಕರಿಗೆ ಕರಾರು ಇಡಬೇಕು. ಗಂಡಸರಾದರೆ ನನ್ನ ಎದುರು ಗೆಲ್ಲಲಿ, ನಾವೇನು ಬಳೆ ತೊಟ್ಕಂಡೀವೇನು ಹಿಂತಾ ///////ಅಣಿಮುತ್ತುಗಳು, ದ್ವೇಷಭಾಷಣಗಳಾದರೂ ನಿಲ್ಲಬಹುದು’ ಎಂದೆ.

‘ಹಂಗೆಲ್ಲ ನಾಲಿಗೆಗೆ ಬೀಗ ಹಾಕೂದು ಇಲ್ಲಿ ನಡಿಯಂಗಿಲ್ಲ. ಕ್ಷೇತ್ರಾಭಿವೃದ್ಧಿ ಕಾಸು ನೀವೇ ಇಟ್ಟುಕೊಳ್ಳಿರಿ, ನಮ್ಮ ನಾಲಿಗೆ ನಮ್ಮ ಸ್ವಾತಂತ್ರ್ಯ ಅನ್ನತಾರಷ್ಟೆ’ ಬೆಕ್ಕಣ್ಣ ಕಣಿ ಹೇಳಿ ನಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.