ಚುರುಮುರಿ:
‘ನಾವು ಆಂಧ್ರಪ್ರದೇಶಕ್ಕೆ ಹೋಗೂದೇ ಛಲೋ ಅನ್ನಿಸತೈತಿ’ ಎಂದು ಬೆಕ್ಕಣ್ಣ ಹೇಳಿದಾಗ ಗಾಬರಿಯಾದೆ. ‘ಈಗ ಪ್ರವಾಸ ಹೋಗೂದೇನು? ನನ್ನ ಹತ್ತರ ರೊಕ್ಕ ಇಲ್ಲ’ ಎಂದು ಕೈಎತ್ತಿದೆ.
‘ಪ್ರವಾಸ ಅಲ್ಲ... ಅಲ್ಲೇ ವಾಸ ಮಾಡಾಕೆ. ನಾವು ಅಂದರೆ ನೀನಲ್ಲ, ನಾವು ಬೆಕ್ಕಿನ ಕುಟುಂಬ ಗಳು ಮಾತ್ರ’ ಬೆಕ್ಕಣ್ಣ ಮುಗುಮ್ಮಾಗಿ ಹೇಳಿತು.
‘ಅಂದ್ರೆ ನೀವೆಲ್ಲಾರೂ ಅಲ್ಲಿಗೇ ಪರ್ಮನೆಂಟಾಗಿ ಶಿಫ್ಟ್ ಆಗತೀರೇನು? ಎದಕ್ಕೆ?’ ಎಂದು ಅಚ್ಚರಿಯಿಂದ ಕೇಳಿದೆ.
‘ಹೌದು... ಆಂಧ್ರದಲ್ಲಿ ಪಂಚಾಯಿತಿ ಚುನಾವಣೆಯಿಂದ ಹಿಡಕೊಂಡು ಎಲ್ಲಾ ಚುನಾವಣೆಗೆ ಸ್ಪರ್ಧಿಸೋ ಅಭ್ಯರ್ಥಿಗಳಿಗೆ ಎರಡು ಮಕ್ಕಳಿಗಿಂತ ಹೆಚ್ಚಿರಬೇಕು ಅಂತ ಚಂದ್ರಬಾಬು ನಾಯ್ಡು ಅಂಕಲ್ಲು ಆರ್ಡರ್ ಮಾಡ್ಯಾರೆ. ನಮ್ಮ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆಗೇನು ಬರ... ಅದಕ್ಕೆ ಆಂಧ್ರಕ್ಕೆ ಹೋಗಿ ಚುನಾವಣೆಗೆ ನಿಲ್ಲತೀವಿ!’ ಎಂದು ಬೆಕ್ಕಣ್ಣ ಮೀಸೆ ತಿರುವಿತು.
‘ಚುನಾವಣೆಗೆ ನಿಲ್ಲೋರು ಮನುಷ್ಯಾರು, ನೀವಲ್ಲ. ಹಂಗೆ ಬೆಕ್ಕುಗಳೆಲ್ಲ ಚುನಾವಣೆಗೆ ನಿಲ್ಲೋದಾದ್ರೆ ಆಂಧ್ರದ ಬೆಕ್ಕುಗಳೇ ನಿಲ್ಲತಾವೆ. ಅಲ್ಲಿ ಬೆಕ್ಕುಗಳ ಸಂಖ್ಯೆಗೇನು ಬರವೇ?’ ನಾನು ವಾದಿಸಿದೆ.
‘ಅದೂ ಖರೇ... ಅಲ್ಲಿ ಬೆಕ್ಕುಗಳ ಸಂಖ್ಯೆ ಎಷ್ಟೇತಿ ಗೊತ್ತಿಲ್ಲ. ದೇಶದಾದ್ಯಂತ ಬೆಕ್ಕುಗಳ ಗಣತಿ ಮಾಡಿದ್ದರೆ ಛಲೋ ಇತ್ತು’ ಬೆಕ್ಕಣ್ಣ ಕೈಕೈ ಹಿಚುಕಿಕೊಂಡಿತು.
‘ಅಲ್ಲಲೇ... ಜನಗಣತಿನೇ ಮಾಡಿಲ್ಲ. 2021ರಲ್ಲಿ ಮಾಡಬೇಕಿತ್ತು. ಕೋವಿಡ್ ಮಾರಿ ನೆಪ ಹೇಳಿ ಮುಂದೆ ಹಾಕಿದ್ರು. ಕೋವಿಡ್ ಯುಗ ಮುಗಿದು ನಾಕು ವರ್ಷ ಆತು. ಈ ವರ್ಷ ಮಾಡತೀವಿ, ಡೇಟಾ ಮುಂದಿನ ವರ್ಷ ಸಿಗತೈತಿ ಅಂದಾರೆ. ಜನಗಣತಿನೇ ಶುರುವಾಗಿಲ್ಲ. ಇನ್ನು ಬೆಕ್ಕುಗಣತಿ ಮಾಡೋರು ಯಾರು?’ ಎಂದೆ.
‘ಜನಗಣತಿ ಮಾಡಿದ್ರೆ ಯಾವ ಧರ್ಮದವ್ರು ಎಷ್ಟು ಮಂದಿ ಅದಾರೆ, ಯಾವ ಧರ್ಮದವರ ಫಲವಂತಿಕೆ ದರ ಎಷ್ಟೇತಿ ಅನ್ನೂ ಸತ್ಯಗಳೆಲ್ಲ ಹೊರಗೆ ಬೀಳತಿತ್ತು. ಭರತಭೂಮಿಯೊಳಗೆ ನೀವು ಮನುಷ್ಯರೇ ಎಷ್ಟು ಜನ ತುಂಬಿಕೊಂಡೀರಿ ಅನ್ನೋದೂ ಗೊತ್ತಾಗತಿತ್ತು’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.