ADVERTISEMENT

ಚುರುಮುರಿ: ಮುಂದುಳಿದವರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 20:59 IST
Last Updated 14 ಏಪ್ರಿಲ್ 2025, 20:59 IST
<div class="paragraphs"><p>ಚುರುಮುರಿ:</p></div>

ಚುರುಮುರಿ:

   

ಡಿ.ಎಸ್.ಲಿಂಗರಾಜು

‘ಜಾತಿ ಜನಗಣತಿ ಕಥೆ ಯಂಗೆ ಸಾ? ಸರಿಲ್ಲ-ಸರಿಯಾಗದೆ ಅಂತ ಆಕ್ರೋಶ, ಆಕ್ಷೇಪ ಸುರುವಾಗ್ಯದಲ್ಲ?’ ತುರೇಮಣೆಗೆ ಕೇಳಿದೆ. ‘ದಿಟವಾಗಿ ಮೀಸಲಾತಿ ಬೇಕಾಗಿರೋದು ರಾಜಕಾರಣಿಗಳ ಬಲಿತ ವರ್ಗಕ್ಕೆ ಮಾತ್ರ ಅಣ್ತಮ್ಮ. ಪಕ್ಷಾಂತರಿಗಳು, ಕಪಟನಾಟಕ ಸೂತ್ರಧಾರಿಗಳು ಹೆಚ್ಚಾಗಿ ಇಲ್ಲೇ ಇರದು’ ಎಂದು ಒಡಪು ಹಾಕಿದರು.

ADVERTISEMENT

‘ರಾಜಕೀಯಕ್ಕೂ ಮೀಸಲಾತಿಗೂ ಏನು ಸಂಬಂಜ?’ ಅಂತ ಸಿಡಿದೆ.

‘ನೋಡ್ಲಾ, ರಾಜಕೀಯದಲ್ಲಿ 1-2-3 ಅಂತ ಮೂರು ಪ್ರವರ್ಗಗಳವೆ. ಅತ್ಯಂತ ಮುಂದುಳಿದ ಒಂದನೇ ಪ್ರವರ್ಗದೇಲಿ ಹಾಲಿ ಮಂತ್ರಿಗಳು, ಶಾಸಕರು ಇರತರೆ. ಅಸೆಂಬ್ಲಿ, ಲೋಕಸಭೆಯಲ್ಲಿ ಇವರ ಕುಟುಂಬಕ್ಕೆ ಶೇಕಡ ನೂರು ಒಳಮೀಸಲಾತಿ ಕೊಡಲೇಬೇಕು’ ಅಂತ ವರ್ಗೀಕರಣ ಮಾಡಿದರು.

‘ಎರಡನೇ ಪ್ರವರ್ಗಕ್ಕೆ ಯಾರನ್ನ ಸೇರಿಸ್ತೀರ?’

‘ಅಲ್ಲಿ ಅರೆ ಮುಂದುಳಿದ ರಾಜಕಾರಣಿಗಳಿರತರೆ. ಅಡವಾದ ಜಾಗದಲ್ಲಿ ಮಂತ್ರಿಯಾಗಿ
ದ್ದಾಗ ಕೆಲವರು ಎಡವಟ್ಟು ಮಾಡಿಕ್ಯಂದು ರಾಜೀನಾಮೆ ಕೊಟ್ಟಿರತರೆ. ವಿಚಾರಣಾ ಸಮಿತಿಯ ಬಿ-ರಿಪೋರ್ಟ್ ತಂದ್ರೆ ತಿರುಗಾ ಮಂತ್ರಿಯಾಗೋ ಮೀಸಲಾತಿ ಶೇಕಡ 50 ಇರತದೆ’ ತುರೇಮಣೆ ಶಾಕ್ ಕೊಟ್ಟರು.

‘ಒಂದರಲ್ಲಿರೋರು ಎರಡಕ್ಕೆ, ಎರಡರಲ್ಲಿ ಇರೋರು ಒಂದಕ್ಕೆ ಆಗಾಗ ಹೋಯ್ತಾ ಇರತರೆ’ ಅಂತ ಯಂಟಪ್ಪಣ್ಣ ಒಗ್ಗರಣೆ ಹಾಕಿತು.

‘ಪ್ರವರ್ಗ- 3ರಲ್ಲಿ ಯಾರಿರತರೋ?’

‘ಇಲ್ಲಿ ಶಾಸಕರು- ಮಂತ್ರಿಗಳ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಸಿ ಜನ ಕರಕಬರೋ ಸಾಮಾನ್ಯ ಕಾರ್ಯಕರ್ತರು ಇರತರೆ. ಒಂದು, ಎರಡನೇ ವರ್ಗಕ್ಕೆ ಹೋಗೋ ಮೀಸಲಾತಿ ಇವರಿಗಿಲ್ಲ’ ತುರೇಮಣೆಯ ಎರಡನೇ ಶಾಕಿಗೆ ಸುಸ್ತಾದೆ.

‘ಆದ್ರೆ ಪ್ರವರ್ಗ-3ಎ ಅಂತ ಅಸಂಘಟಿತ ಸಾಮಾನ್ಯ ವರ್ಗ ಅದೆ. ಇವರು ಮೀಸಲಾತಿಗೆ ಕಾಯದೇ ದುಬಾರಿ ಟ್ಯಾಕ್ಸು, ಡೊನೇಶನ್ ಕಟ್ಟಿ ಬದುಕೋರು. ಇವರಿಗೇನು ಸಿಕ್ತದೆ?’ ಅಂದುದ್ಕೆ ತುರೇಮಣೆ ‘1- 2ನೇ ವರ್ಗಕ್ಕೆ 3ಎ ವರ್ಗದೋರು ವೋಟ್ ಬ್ಯಾಂಕ್ ಅಷ್ಟೆ ಕಲಾ. ಎಲ್ಲಾ ಇವರ ಹೆಸರಲ್ಲೇ ನಡಿತದೆ. ಇವರಿಗೆ ಮಾತ್ರ ಏನೂ ದಕ್ಕಕುಲ್ಲ’ ಅಂತ ಗಹಗಹಿಸಿ ನಕ್ಕು ನಮ್ಮನ್ನೂ ನಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.