ADVERTISEMENT

ಚುರುಮುರಿ: ರೌಡಿ ಎಮ್ಮೆಲ್ಲೆ!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 19:09 IST
Last Updated 6 ಡಿಸೆಂಬರ್ 2022, 19:09 IST
1
1   

‘ಏನಣ್ಣೋ, ಮಚ್ಚು, ಲಾಂಗ್ ಬೆನ್ ಹಿಂದೆ ಸಿಗಿಸ್ಕೊಂಡು ಎಲ್ಲಿಗ್ ಹೊಂಟೆ...’ ಕುತೂಹಲದಿಂದ ಕೇಳ್ದ ಮುದ್ದಣ್ಣ.

‘ಟಿಕೆಟ್ ಕೇಳೋಕೆ...’ ಖಡಕ್ ಆಗಿ ಹೇಳ್ದ ರೌಡಿ ವಿಜಿ.

‘ಈಗೇನಣ್ಣ, ಆನ್‌ಲೈನ್‌ನಲ್ಲೇ ಬಸ್ಸು, ಟ್ರೈನ್ ಟಿಕೆಟ್ ಬುಕ್ ಮಾಡಬಹುದು, ಅಷ್ಟ್ ದೂರ ಹೋಗಿ ಯಾಕ್ ಎಲ್ರನ್ನ ಹೆದರಿಸಿ ಬರ್ತೀಯ?’

ADVERTISEMENT

‘ಬಸ್ ಟಿಕೆಟ್ ಅಲ್ವೋ, ಪೊಲಿಟಿಕಲ್ ಪಾರ್ಟಿ ಟಿಕೆಟ್, ಎಲೆಕ್ಷನ್‌ಗೆ ನಿಲ್ತೀನಿ ನಾನು’ ಮೀಸೆ ತಿರುವಿಕೊಂಡು ಹೇಳ್ದ.

‘ಏನಣ್ಣೋ ನೀನು, ಬಾಸ್‌ಗಳಿಗೇ ಬಾಸ್ ಆಗೋಕೆ ಹೋಗ್ತಿದಿಯಾ...’

‘ಮತ್ತೆ, ನನ್ ಜೊತೆ ಪೊಲೀಸ್ ಸ್ಟೇಷನ್‌ನಲ್ಲಿ ಫೋಟೊ ಹಾಕಿಸ್ಕೊಂಡಿದ್ದವರೆಲ್ಲ ರಾಜಕೀಯ ಸೇರಿ ಏನೇನೋ ಆಗಿದಾರೆ, ನನಗೂ ಪೊಲಿಟಿಷಿಯನ್ ಆಗಿ, ಎಮ್ಮೆಲ್ಲೆ ಆಗೋ ಅರ್ಹತೆ ಇಲ್ವ?’

‘ಖಂಡಿತ ಐತೆ ಬಿಡಣ್ಣ. ಅದ್ ಸರಿ, ಬೆನ್ ಹಿಂದೆ ಮಚ್ಚು ಹಿಡ್ಕೊಂಡವ್ನು, ಕೈಯಲ್ಲಿ ವೈಟ್ ಅಂಡ್ ವೈಟ್ ಪಂಚೆ, ಶರ್ಟು, ಹಾರ- ತುರಾಯಿ ಇರೋ ಬ್ಯಾಗ್ ಬೇರೆ ಹಿಡ್ಕೊಂಡಿದಿಯಾ’.

‘ಟಿಕೆಟ್ ಕೊಟ್ಟ ಮೇಲೆ ಮನಃಪರಿವರ್ತನೆ
ಆಗುತ್ತಲ್ಲ, ಆಗ ಹಾಕ್ಕೊಳೋಕೆ ಬೇಕಲ್ಲ’ ವಿನಯದಿಂದ‌ ಹೇಳ್ದ ವಿಜಿ.

‘ಯಾವ ಪಾರ್ಟಿಯವರಿಗೆ ಕೇಳ್ತೀಯಣ್ಣ’.

‘ನಮ್ ಸೀನಿಯರ್ಸ್‌ಗೆಲ್ಲ ಆ ಪಾರ್ಟಿಯವರು ಕೊಡ್ತಿದ್ರು, ಈಗ ಈ ಪಾರ್ಟಿಯವ್ರು ನಮ್ಮ ಬಗ್ಗೆ ಸಾಫ್ಟ್‌ಕಾರ್ನರ್‌ನಿಂದ ಮಾತಾಡ್ತಿದಾರೆ, ಹಾಗಾಗಿ ಇವರನ್ನೇ ಕೇಳ್ತೀನಿ’.

‘ಅವರು- ಇವರು ಯಾರೂ ಟಿಕೆಟ್ ಕೊಡಲಿಲ್ಲ ಅಂದ್ರೆ...’

‘ನಾನೇ ಅವರಿಗೆ ಟಿಕೆಟ್ ಕೊಟ್ಟು ಬರ್ತೀನಿ’ ದೃಢ ಮತ್ತು ಗಟ್ಟಿ ದನಿಯಲ್ಲಿ ಹೇಳ್ದ ರೌಡಿ ವಿಜಿ.

‘ಮನಃಪರಿವರ್ತನೆ ಆದ್ಮೇಲೂ ಹಾಗೆಲ್ಲ ಮಾಡ್ತಿಯೇನಣ್ಣೋ?’

‘ಬಂದ ದಾರಿ ಮರೀಬಾರದಲ್ವ ಮುದ್ದಣ್ಣ. ಅದಕ್ಕೆ ಎಮ್ಮೆಲ್ಲೆ ಆದ್ಮೇಲೂ ಮತ್ತೆ ಮನಃಪರಿವರ್ತನೆ ಮಾಡ್ಕೊತೀನಿ’.

‘ಅಂದ್ರೆ?’

‘ರೌಡಿ ಎಮ್ಮೆಲ್ಲೆ ಆಗ್ತೀನಿ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.