ADVERTISEMENT

ಚುರುಮುರಿ: ಬೆಕ್ಕಣ್ಣನ ವಾದವಿರಾಮ

ಸುಮಂಗಲಾ
Published 6 ಮಾರ್ಚ್ 2022, 22:30 IST
Last Updated 6 ಮಾರ್ಚ್ 2022, 22:30 IST
.
.   

‘ಆಪರೇಶನ್ ಗಂಗಾ ಅಂತ ಮೊನ್ನಿಯಿಂದ ಟೀವಿವಳಗ ಬಡಕೊಳ್ಳಾಕ ಹತ್ಯಾರ. ಗಂಗಾನದಿಗೆ ಎದಕ್ಕ ಈಗ ಆಪರೇಶನ್ ಮಾಡಾಕ ಹತ್ಯಾರ? ಆವಾಗೇ ಅದೇನೋ ನಮಾಮಿ ಗಂಗಾ ಅಂತ ಮಾಡಿ, ಭಯಂಕರ ಸ್ವಚ್ಛ ಮಾಡೀವಿ ಅಂತಿದ್ದರಲ್ಲ’ ಬೆಕ್ಕಣ್ಣ ತಲೆ ಕೆರೆಯುತ್ತ ಕೇಳಿತು.

‘ಎಷ್ಟರ ಪೆದ್ದುಗುಂಡಿ ಅದೀಯಲೇ... ಸುದ್ದಿ ಪೂರಾ ಕೇಳಿ ಮಾತಾಡು. ಆಪರೇಶನ್ ಗಂಗಾ ಅಂದ್ರ ಉಕ್ರೇನಿನಾಗೆ ಮೆಡಿಕಲ್ ಓದಾಕೆ ಹೋದ ನಮ್ಮ ಹುಡಗ್ರಿನ್ನ ವಿಮಾನದಾಗೆ ಕರ್ಕಂಡು ಬರತಾರ’ ಎಂದು ವಿವರಿಸಿದೆ.

‘ಅವ್ರೆಲ್ಲ ಮೆಡಿಕಲ್ ಹುಡುಗ್ರು ಅಂದರ ಈ ಯೋಜನೆಗೆ ಆಪರೇಶನ್ ಚರಕ ಅಥವಾ ಆಪರೇಶನ್ ಸುಶ್ರುತ ಅಂತ ಹೆಸರು ಇಡಬೇಕಿತ್ತು, ಹೌದಿಲ್ಲೋ’ ಎಂದು ಅಗದಿ ಶಾಣ್ಯಾತನದ ಪ್ರಶ್ನೆ ಕೇಳಿತು ಬೆಕ್ಕಣ್ಣ.

ADVERTISEMENT

‘ಎಷ್ಟರ ಬೆರಕಿ ಅದೀಯಲೇ... ಈಗ ಚುನಾವಣೆ ನಡಿತಾ ಇರದು ಉತ್ತರಪ್ರದೇಶದಾಗೆ. ಚರಕ, ಸುಶ್ರುತ ಅಂತೆಲ್ಲ ಎದಕ್ಕ ಹೆಸರಿಡತಾರ’ ಎಂದೆ ನಾನು.

‘ಹಂಗೇನು’ ಎನ್ನುತ್ತ ಒಂದಿಷ್ಟು ಸುದ್ದಿ ತಿರುವಿ ಹಾಕಿದ ಬೆಕ್ಕಣ್ಣ, ‘ಏನೇ ಹೇಳು... ನಮ್ ಮೋದಿಮಾಮಾ ಇಷ್ಟ್ ಕಾಳಜಿ ಮಾಡ್ತಾನಂತ ಹುಡುಗ್ರು ಸುರಕ್ಷಿತವಾಗಿ ಬರಾಕಹತ್ಯರ. ಅವ್ರಿಗೆ ಸಹಾಯ ಮಾಡಕ್ಕಂತ ಉಕ್ರೇನ್ ಗಡಿ ದೇಶಗಳಿಗೆ ನಾಕೈದು ಸಚಿವರನ್ನ ಕಳಿಸ್ಯಾನ, ಏರ್‌ಫೋರ್ಸ್ ವಿಮಾನ ಕಳಿಸಿ ಎಷ್ಟಕೊಂದು ವಿದ್ಯಾರ್ಥಿಗಳನ್ನ ಕರ್ಕಂಡು ಬಂದಾರ’ ಎಂದು ಗುಣಗಾನ ಶುರು ಮಾಡಿತು.

‘ಸರಿಯಾಗಿ ಓದಲೇ. ಎಲ್ಲಾ ನಾವೇ ಮಾಡೀವಿ ಅಂತ ನಿಮ್ಮ ಜ್ಯೋತಿರಾದಿತ್ಯ ಅಂಕಲ್ ಅಲ್ಲಿ ಬುರುಡೆ ಬಿಡ್ತಿದ್ದನಂತೆ. ನಿಮ್ಮ ಹುಡುಗ್ರಿಗೆ ಹೊಟ್ಟಿಗೆ ಹಾಕಿ, ಜಾಗ ಕೊಟ್ಟಿದ್ದು ನಾನು, ನೀವಲ್ಲ ಅಂತ ರೊಮೇನಿಯಾದ ಮೇಯರ್ ಮಸ್ತ್ ಝಾಡಿಸ್ಯಾನ’ ಎಂದು ಛೇಡಿಸಿದೆ.

‘ಹೋಗ್ಲಿ ಬಿಡತ್ತಾಗೆ. ಕರುನಾಡಿನ ಬಜೆಟ್ ನೋಡೀಯೇನ್... ಕಾಶೀಯಾತ್ರೆ ಮಾಡೋರಿಗೆ ಬೊಮ್ಮಾಯಿ ಅಂಕಲ್ ಸಹಾಯಧನ ಕೊಡ್ತಾನಂತ. ನಾವು ಕಾಶಿಯಾತ್ರೆಗರ ಹೋಗೂಣು... ಲಗೂನೆ ಹೆಸರು ಹಚ್ಚು’ ಎಂದು ವಾದವಿರಾಮ ಘೋಷಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.