ADVERTISEMENT

ಚುರುಮುರಿ: ಉಣ್ಣುವ ಆಟ!

ತುರುವೇಕೆರೆ ಪ್ರಸಾದ್
Published 10 ಡಿಸೆಂಬರ್ 2024, 21:38 IST
Last Updated 10 ಡಿಸೆಂಬರ್ 2024, 21:38 IST
<div class="paragraphs"><p>ಚುರುಮುರಿ: ಉಣ್ಣುವ ಆಟ!</p></div>

ಚುರುಮುರಿ: ಉಣ್ಣುವ ಆಟ!

   

‘ಏನಪ್ಪಾ, ಎಲ್ಲಾ ಕಡೆ ಊಟದ್ದೇ ಚಿಂತೆ ಆಗದೆ, ಚಳಿಗಾಲದ ಅಧಿವೇಶನದ ನಮ್ ನಾಯಕರ ಊಟದ್ ಬಗ್ಗೆ ಪೇಪರ್ನೋರು ಏನೂ ಬರ್ದೇ ಇಲ್ವಲ್ಲಪ್ಪ’ ಎಂದ ಗುದ್ಲಿಂಗ.

‘ಅವರು ತಿಂತಾನೇ ಇರೋದ್ರಿಂದ ಮತ್ತೆ ಮತ್ತೆ ಅವರ ಮೆನು ಬಗ್ಗೆ ಬರುದ್ರೆ ಬೇಜಾರ್ ಮಾಡ್ಕತರೆ ಅಂತ ಸುಮ್ಕಾಗವ್ರೆ ಕಣ್ಲಾ’ ಎಂದ ಮಾಲಿಂಗ.

ADVERTISEMENT

‘ಆದ್ರೂ 15 ದಿನದ ಊಟಕ್ಕೆ 3 ಕೋಟಿ ಆಯ್ತದೆ ಅಂತ ಅಂದಾಜ್ ಮಾಡವ್ರಲ್ಲ. ಈ ದಪ ಕೈ, ಮೈತ್ರಿಕೂಟದೋರಿಬ್ರೂ ಎಣ್ಣೆ ಬಳ್ಕಂಡು ಕಾಲು ಎಳೆದು ಕಬಡ್ಡಿ ಆಡಕ್ಕೆ ಒಂಟಿರೋದ್ರಿಂದ ಬರೀ ಉತ್ತರ ಕರ್ನಾಟಕದ ಖಾರದ ಐಟಮ್ಮೇ ಇರ್ತದೆ ಕಣ್ರಲಾ’.

‘ಹೌದೇಳಪ್ಪ, ವಿಧಾನಸಭೆ ರಂಗೇರಿದಂಗೆ ಕೈನೋರ್ಗೇ ಬೇರೆ, ಮೈತ್ರಿಯೋರ್ಗೇ ಬೇರೆ ಅಂತ ಎಲ್ಡು ಸಪರೇಟ್ ಊಟದ್ ಸ್ಟಾಲ್ ಮಾಡ್ತರೆ ಅಂತ ಕಾಣ್ತದೆ’.

‘ಸಪರೇಟ್ ಊಟದ ಸ್ಟಾಲ್ ಯಾಕ್ಲಾ?’

‘ಯಾಕಂದ್ರೆ ಅವರವರ ಟೇಸ್ಟ್‌ಗೆ ತಕ್ಕ ಹಂಗೆ ಮಾಡ್ಬೇಕಲ್ವಾ? ಜೋಳದ ರೊಟ್ಟಿ, ಸಾಮೆ ಅಕ್ಕಿ ಅನ್ನ, ಸಂಗಟಿ ಸಾರು, ಶೇಂಗಾ ಚಟ್ನಿಪುಡಿ ಇದೆಲ್ಲಾ ಕಾಮನ್ನಾಗಿ ಇದ್ದೇ ಇರುತ್ತೆ.  ಮೈತ್ರಿಯೋರ್ಗೆ ಸ್ಪೆಷಲ್ಲಾಗಿ ಮೂಡಾ ಚೂಡಾ, ರೀಡೂ ಬೋಂಡಾ, ವರ್ಕ್ಫ್‌ ಹುಗ್ಗಿ, ಕುರ್ಚಿ ಬಜ್ಜಿ, ವಾಲ್ಮೀಕಿ ಮುಟಗಿ, ಅಂಗೇ ಕೈನೋರ್ಗೆ ಕೋವಿಡ್ ಪಕೋಡಾ, ಗಣಿ ಗುರೆಳ್ಳು, ಪೋಕ್ಸೊ ಕರಂಡಿ, ಟರ್ಮಿನಲ್ ತಾಲಿಪಟ್ಟು ಇರಬಹುದು’.

‘ಅದ್ರಲ್ಲೂ ನಮ್ ಗೆದ್ದೇಂದ್ರ ಮತ್ತು ಉತ್ನಾಳು ವರ್ಕ್ಫ್‌ ಹುಗ್ಗಿಲೇ ಖಾರದ ಹುಗ್ಗಿ, ಸಿಹಿ ಹುಗ್ಗಿ ಅಂತ  ಬೇರೆ ಬೇರೆ ವೆರೈಟಿ ಡಿಮ್ಯಾಂಡ್ ಮಾಡ್ಬಹುದು’.

‘ಆಮೇಲೆ ನಮ್ಮ ಕೆಲವು ಅಣ್ಣಂದಿರು ಎರಡು ಕಡೆನೂ ರುಚಿ ನೋಡ್ಬಹುದು ಅಲ್ವಾ?’

‘ಅಯ್ಯೋ! ನಾವು ಅಂಗ್ ಅಂದ್ಕತೀವಿ ಕಣ್ರಲಾ, ನೈಂಟಿ ಒಳಕ್ ಓಗ್ಬುಟ್ರೆ ಯಾರ್‍ಗೆ ಯಾವ ಸ್ಟಾಲೂ ಜ್ಞಾಪಕ ಇರಕಿಲ್ಲ. ಇವರು ಈ ಕಡೆ, ಅವರು ಆ ಕಡೆ ತಿಂತರೆ! ಅದೊಂದ್ ಆಟ ಆಗ್ಬುಡುತ್ತೆ’.

‘ಹ್ಞೂಂ ಕಣ್ರೋ ‘ಮಾಡಿದ್ದುಣ್ಣೋ ಮಹರಾಯ’ ಅನ್ನೋದು ಅಪ್ಲೈ ಆಗೋದು ವೋಟ್ ಹಾಕಿದ ನಮಗೆ ಮಾತ್ರ’ ಎಂದ ಪರ್ಮೇಶಿ. ಎಲ್ಲಾ ಹೌದ್ಹೌದು ಎಂದು ತಲೆಯಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.