‘ಅನ್ನಭಾಗ್ಯ ಕೊಟ್ಟ ನಮಗೇ ಆ ದೇವರು ಉಣ್ಣೋ ಭಾಗ್ಯ ಕೊಡಲಿಲ್ಲ...’ ನಾಯಕರು ಬೇಸರಗೊಂಡರು.
‘ಗುಟ್ಟಾಗಿ ಉಣ್ಣಬೇಡಿ, ಒಟ್ಟಾಗಿ ಉಣ್ಣಿರಿ ಅಂತ ಹೈಕಮಾಂಡ್ ದೇವರು ಹೇಳಿದೆ ಕಣ್ರೀ’ ಕಾಫಿ ತಂದುಕೊಟ್ಟರು ಪತ್ನಿ.
‘ನಮ್ಮ ಗುಂಪು ಊಟಗಾರಿಕೆಯಿಂದ ಕೆಲವರಿಗೆ ಅಜೀರ್ಣ, ಅಲರ್ಜಿ, ಹೊಟ್ಟೆಯುರಿ ಉಂಟಾಗುವುದಂತೆ. ಇದರಿಂದ ಪಕ್ಷದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಂತ ಬ್ರೇಕ್‍ಫಾಸ್ಟ್‌ಗೆ ಹೈಕಮಾಂಡ್ ಬ್ರೇಕ್ ಹಾಕಿದೆ, ಡಿನ್ನರ್‌ಗೆ ಗೇಟ್ ಹಾಕಿದೆ’.
‘ಹೆಂಡ್ತಿ, ಮಕ್ಕಳ ಜೊತೆ ಮನೆಯೂಟ ಮಾಡುವ ಫುಡ್ ಕಲ್ಚರ್ ರೂಢಿಸಿಕೊಳ್ಳುವುದು ಗುಡ್ ಕಲ್ಚರ್ ಅಂತ’.
‘ಪಕ್ಷದ ಸಂಘಟನೆ, ಅಭಿವೃದ್ಧಿ ಕುರಿತು ಚಿಂತನೆ, ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಊಟಕೂಟ ಆಯೋಜಿಸುವುದು ತಪ್ಪಾ?’
‘ತಪ್ಪಂತೆ. ಸಚಿವ ಸಂಪುಟ ಸಭೆ, ಸಾಮಾನ್ಯ ಸಭೆಯಲ್ಲೂ ಅಭಿವೃದ್ಧಿ ಕುರಿತು ಚರ್ಚೆ ಮಾಡಬಹುದಲ್ವಾ ಎಂದು ವಿಪಕ್ಷದವರು ನಿಮ್ಮ ಊಟಕ್ಕೆ ಹುಳಿ ಹಿಂಡುತ್ತಿದ್ದಾರೆ. ಊಟದ ಮೆನು, ಊಟಗಾರರ ಪಟ್ಟಿ, ಬಾಳೆಲೆಯ ಊಟವೋ ಬೆಳ್ಳಿತಟ್ಟೆ ಊಟವೋ ಎನ್ನುವ ವಿವರವಾದ ವರದಿಯನ್ನು ಹೈಕಮಾಂಡ್‍ಗೆ ಒಪ್ಪಿಸಿ ಊಟಕ್ಕೆ ಅನುಮತಿ ಪಡೆಯಿರಿ’.
‘ಮೆನು ಬಗ್ಗೆ ಹೈಕಮಾಂಡ್‍ಗೆ ಚಿಂತೆಯಿಲ್ಲ, ಊಟದ ಜೊತೆ ನೆಂಚಿಕೊಳ್ಳುವ ವಿಚಾರಗಳ ಬಗ್ಗೆ ತಕರಾರು!’ ನಾಯಕರು ನಕ್ಕರು.
‘ಹೋಗ್ಲಿಬಿಡಿ, ಇಂದಿರಾ ಕ್ಯಾಂಟೀನ್ ನಿರ್ವಹಣೆ ಹೊಣೆಯನ್ನು ಮಹಿಳೆಯರಿಗೆ ವಹಿಸಬೇಕು ಎಂದು ಅಂದುಕೊಂಡಿದ್ದೀರಂತೆ?’
‘ಹೌದು, ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಕ್ಯಾಂಟೀನ್ ಭಾಗ್ಯ ನೀಡುತ್ತೇವೆ’.
‘ಹಾಗಲ್ಲಾರೀ, ಕ್ಯಾಂಟೀನ್‍ನಲ್ಲಿ ರೇಷನ್ ತಂದುಕೊಡುವಂತಹ, ತರಕಾರಿ ಹೆಚ್ಚಿಕೊಡುವಂತಹ ಸೇವಾ ಭಾಗ್ಯವನ್ನಾದರೂ ಬಡಪಾಯಿ ಪುರುಷರಿಗೆ ಕೊಡಿ, ಪಾಪ!’ ಎಂದು ಕಾಫಿ ಗ್ಲಾಸ್ ತೆಗೆದುಕೊಂಡು ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.