ಗೋಪಾಲಿ, ವೈಶಾಲಿ ಮನೆಗೆ ಬಂದು, ‘ಮಹಾಕುಂಭಮೇಳಕ್ಕೆ ಪ್ಯಾಕೇಜ್ ಟೂರ್ ಹೋಗಿ ಪುಣ್ಯಸ್ನಾನ ಮಾಡಿ ಬಂದ್ವಿ...’ ಎಂದು ಪ್ರಸಾದ ಕೊಟ್ಟರು.
‘ಪವಿತ್ರ ಸ್ನಾನದ ಪ್ರಭಾವವೋ ಏನೋ ನಿನ್ನಲ್ಲಿ ಬಹಳಷ್ಟು ಬದಲಾವಣೆ ಕಾಣ್ತಿದೆ. ಮೊದಲಿದ್ದ ಗತ್ತು, ದೌಲತ್ತು ಮರೆಯಾಗಿ ಸಹನೆ, ಸೌಜನ್ಯ ಕಾಣ್ತಿದೆ’ ಅಂದ ಶಂಕ್ರಿ.
‘ನನ್ನ ಹೆಂಡ್ತಿಯ ಸಿಟ್ಟು ಸಿಡುಕೂ ಕಮ್ಮಿಯಾಗಿದೆ. ಮನುಷ್ಯರಾಗಿ ನಾವು ಗೊತ್ತಿದ್ದೊ ಗೊತ್ತಿಲ್ಲದೆಯೋ ಪಾಪ ಮಾಡಿರ್ತೀವಿ. ಪವಿತ್ರ ನದಿಯಲ್ಲಿ ಮುಳುಗಿದರೆ ಪಾಪ ನಿವಾರಣೆಯಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಅಂತ ಗುರೂಜಿ ಹೇಳಿದ್ದರು, ಹೋಗಿಬಂದ್ವಿ’ ಅಂದ ಗೋಪಾಲಿ.
‘ದಿನಾ ಜಗಳವಾಡುವ ರಾಜಕಾರಣಿಗಳು ಪವಿತ್ರ ಸ್ನಾನ ಮಾಡಿದರೆ ಅವರಲ್ಲಿ ಶಾಂತಿ, ಸಹನೆ ಮೂಡಿ ಅವರ ಕುರ್ಚಿ ಇಷ್ಟಾರ್ಥಗಳು ಈಡೇರುತ್ತಿದ್ದವೇನೋ...’ ಕಾಫಿ ತಂದುಕೊಟ್ಟಳು ಸುಮಿ.
‘ರಾಜಕಾರಣಿಗಳು, ಮಂತ್ರಿಮಹೋದಯರು, ಸಾಧುಸಂತರು, ಸಿನಿಮಾ ನಟನಟಿಯರೂ ನದಿಯಲ್ಲಿ ಮುಳುಗಿ ಪಾಪ ತೊಳೆದುಕೊಂಡ್ರು ಕಣ್ರೀ’ ವೈಶಾಲಿ ಹೇಳಿದಳು.
‘ಅಂದಹಾಗೆ... ಕುಂಭಮೇಳದಲ್ಲಿ ಮಾಲೆ ಮಾರುವ ಮೊನಾಲಿಸಾ ಸಿಕ್ಕಿದ್ದಳಾ?!’ ಶಂಕ್ರಿ ಕೇಳಿದ.
‘ಸಿಕ್ಕಿದ್ದಳು. ಅವಳನ್ನು ನೋಡಲು ಜನವೋ ಜನ. ನೂಕುನುಗ್ಗಲಲ್ಲಿ ನಾನೂ ಹೋಗಿ ಅವಳ ಜೊತೆ ಸೆಲ್ಫಿ ತಗೊಂಡೆ’ ಅಂದ ಗೋಪಾಲಿ.
‘ನನ್ನ ಕಣ್ಣು ತಪ್ಪಿಸಿ ಅದ್ಯಾವಾಗ ಹೋಗಿ ಅವಳ ಜೊತೆ ಸೆಲ್ಫಿ ತಗೊಂಡ್ರೀ?’ ವೈಶಾಲಿಗೆ ಸಿಟ್ಟು ಬಂತು.
‘ಹಾಗಲ್ಲಾ, ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಅವಳಿಗೆ ಆಫರ್ ಬಂದಿದೆಯಂತೆ. ಹೀರೋಯಿನ್ ಆದ್ಮೇಲೆ ಸೆಲ್ಫಿ ಕಷ್ಟ ಅಂತ...’ ಗೋಪಾಲಿ ತಡವರಿಸಿದ.
‘ಪರ್ವಾಗಿಲ್ಲ ಬಿಡಿ, ಅವಳ ಜೊತೆ ನಾನೂ ಸೆಲ್ಫಿ ತಗೊಂಡಿದ್ದೀನಿ...’ ಎಂದು ವೈಶಾಲಿ ಮೊಬೈಲ್‍ನಲ್ಲಿ ಫೋಟೊ ತೋರಿಸಿ ಸಂಭ್ರಮಿಸಿದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.