ಸಚಿವರು ಜಾತಿ ಜನಗಣತಿಯ ವರದಿ ಅಧ್ಯಯನದಲ್ಲಿ ಮುಳುಗಿದ್ದರು.
‘ಆ ವಯಸ್ಸಿನಲ್ಲಿ ಹೀಗೆ ಗಂಭೀರವಾಗಿ ಅಧ್ಯಯನ ಮಾಡಿದ್ದರೆ ಐಎಎಸ್ಸೊ ಐಪಿಎಸ್ಸೊ ಪಾಸಾಗ್ತಿದ್ರಿ’ ಎನ್ನುತ್ತಾ ಪತ್ನಿ ಕಾಫಿ ತಂದುಕೊಟ್ಟರು.
‘ಅಧ್ಯಯನ ಮಾಡಲು ಸಿಎಂ ವರದಿಯ ಪ್ರತಿ ಕೊಟ್ಟಿದ್ದಾರೆ. 8-10 ಸಂಪುಟಗಳಿವೆ. ವರದಿಯಲ್ಲಿನ ಲೆಕ್ಕಾಚಾರಗಳನ್ನು ಅರ್ಥ ಮಾಡಿಕೊಳ್ಳೋದು ಸರಳ ಅಲ್ಲ’ ಕಾಫಿ ಹೀರಿದರು.
‘ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಗಣತಿಯ ವರದಿ ಗಣಿತದಷ್ಟೇ ಕಬ್ಬಿಣದ ಕಡಲೆ ಏನ್ರೀ?’
‘ಬರೀ ಗಣಿತ ಅಲ್ಲ, ಸಮಾಜ, ವಿಜ್ಞಾನ, ಕನ್ನಡ, ಇಂಗ್ಲಿಷ್, ಸೋಷಿಯಲ್ ಸೈನ್ಸ್, ಪೊಲಿಟಿಕಲ್ ಸೈನ್ಸ್, ಹಿಸ್ಟರಿ, ಎಕನಾಮಿಕ್ಸ್ ಎಲ್ಲಾ ಮಿಕ್ಸ್ ಆಗಿವೆ. ಕಥೆ, ಕವನ ಓದುವಷ್ಟು ಸುಲಭವಲ್ಲ ಜಾತಿ ಜನಗಣತಿ ವರದಿ ಓದಿ ಅರ್ಥ ಮಾಡಿಕೊಳ್ಳೋದು’.
‘ಆಳವಾಗಿ ಅಧ್ಯಯನ ಮಾಡಿ, ವರದಿಯನ್ನು ಸಮರ್ಥಿಸಿಕೊಳ್ಳಬೇಕು ಅಂತ ಸಿಎಂ ಹೇಳಿದ್ದಾರಲ್ರೀ. ಅಧ್ಯಯನ ಕಷ್ಟವಾದರೆ ತಜ್ಞರ ಬಳಿ ಟ್ಯೂಷನ್‍ಗೆ ಹೋಗ್ರಿ. ಮಂತ್ರಿಗಳಿಗೆ ಸರ್ಕಾರ ಜಾತಿ ಜನಗಣತಿಯ ಪರೀಕ್ಷೆ ನಡೆಸಿಬಿಟ್ಟರೆ, ನೀವು ಫೇಲಾದರೆ ಅವಮಾನ ಆಗುತ್ತೆ’.
‘ವರದಿಯಲ್ಲಿರುವ ಅಷ್ಟೂ ಜಾತಿಗಳು, ಜನಸಂಖ್ಯೆ, ಅವರ ಸ್ಥಾನಮಾನ, ನೀಡಬೇಕಾದ ಮೀಸಲಾತಿ ಲೆಕ್ಕಾಚಾರಗಳು ತಲೆ ಕೆಡಿಸುತ್ತವೆ’.
‘ಜಾತಿ ಜನಗಣತಿ ವರದಿ ಗರ್ಜನೆ ಮಾಡುತ್ತಿದೆ. ವರದಿಯೊಳಗೆ ಹುಲಿ ಇದೆಯೋ ಜಿಂಕೆ ಇದೆಯೋ ಅಧ್ಯಯನ ಮಾಡಿ ರಾಜ್ಯದ ಜನರಿಗೆ ನೀವು ತಿಳಿಸಬೇಕು. ವರದಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ಪತ್ರಕರ್ತರು ಕೇಳಿದರೆ ಏನು ಹೇಳ್ತೀರಿ?’
‘ಹೇಳ್ತೀನಿ, ಜಾತಿ ಜನಗಣತಿ ವರದಿ ಬಗ್ಗೆ ನಮ್ಮ ಸಮುದಾಯದ ಸ್ವಾಮೀಜಿಗಳು, ಮುಖಂಡರು ಏನು ಹೇಳ್ತಾರೋ ಅದೇ ನನ್ನ ಅಭಿಪ್ರಾಯ ಅಂತ ಹೇಳ್ತೀನೆ’ ಎಂದರು ಮಂತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.