ಚಟ್ನಿಹಳ್ಳಿಯಲ್ಲಿ ಹಲವು ಮನೆಗಳಿಗೆ ಬೀಗ ಬಿದ್ದಿತ್ತು. ಅಲ್ಲೊಂದು ಇಲ್ಲೊಂದು ಮನೆಯಲ್ಲಿ ವಯಸ್ಸಾದವರು, ಕೈಲಾಗದವರು ಉಳಿದಿದ್ದರು.
ಮೈಕ್ರೊ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದವರು ತೀರಿಸಲಾಗದೆ, ಅವರ ಕಿರುಕುಳ ತಾಳಲಾಗದೆ ರಾತ್ರೋರಾತ್ರಿ ಹೆಂಡತಿ, ಮಕ್ಕಳೊಂದಿಗೆ ಊರು ಬಿಟ್ಟಿದ್ದರು. ಎಲ್ಲಿಗೆ ಹೋದರು, ಏನಾದರು ಅಂತ ಗೊತ್ತಿಲ್ಲ. ಕಾಣೆಯಾದವರ ಬಗ್ಗೆ ಕಂಪ್ಲೇಂಟ್ ಕೊಡುವವರೂ ಇಲ್ಲ.
ಪೊಲೀಸರು ಊರಿನಲ್ಲಿ ಗಸ್ತು ಮಾಡುತ್ತಿದ್ದರು. ವರದಿ ಮಾಡಲು ಸರ್ಕಾರಿ ಅಧಿಕಾರಿಗಳು ಚಟ್ನಿಹಳ್ಳಿಗೆ ಬಂದರು.
ಮನೆಯಲ್ಲಿದ್ದ ತಿಮ್ಮಜ್ಜ, ತಿಮ್ಮಜ್ಜಿ ಬಳಿಗೆ ಬಂದ ಅಧಿಕಾರಿಗಳು, ‘ಯಾಕೆ ಜನ ಊರು ಬಿಟ್ಟಿದ್ದಾರೆ?’ ಕೇಳಿದರು.
‘ದೊಡ್ಡವರು ದೊಡ್ಡ ಸಾಲ ಮಾಡಿಕೊಂಡು ದೇಶ ಬಿಟ್ರು, ಸಣ್ಣವರು ಸಣ್ಣ ಸಾಲ ಮಾಡಿಕೊಂಡು ಊರು ಬಿಟ್ರು...’ ತಿಮ್ಮಜ್ಜ ಒಗಟಿನಂಥಾ ಉತ್ತರ ಕೊಟ್ಟ.
‘ದನಕರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹೋಗಿದ್ದಾರೆ, ಹುಲ್ಲುನೀರಿಲ್ಲದೆ ಅವು ‘ಅಂಬಾ...’ ಅನ್ತಿವೆ...’ ತಿಮ್ಮಜ್ಜಿಗೆ ಕರುಳು ಚುರುಕ್ ಅಂದಿತು.
‘ಮೈಕ್ರೊ ಫೈನಾನ್ಸ್ ಕಂಪನಿಗಳ ಬಳಿ ಜನ ಸಾಲ ಮಾಡಬಾರದಾಗಿತ್ತು...’ ಅಂದ್ರು ಅಧಿಕಾರಿ.
‘ಸಾಲ ಕೊಡ್ತೀವಿ ತಗೊಳ್ಳಿ ಅಂತ ಮನೆ ಬಾಗಿಲಿಗೆ ಬಂದರೆ ಯಾರು ಬೇಡ ಅಂತಾರೆ? ಈಸ್ಕೊಂಡ್ರು, ಖರ್ಚು ಮಾಡಿಕೊಂಡ್ರು’.
‘ಫೈನಾನ್ಸ್‌ನವರು ಜನರಿಗೆ ಕಿರುಕುಳ ಕೊಡ್ತಿದ್ರಾ?’
‘ಕೊಡದೇ ಇರ್ತಾರಾ? ಹೆಂಡ್ತಿ ತಾಳಿ ಮಾರಿ ದುಡ್ಡು ಕೊಡು ಅಂದ್ರು, ಸತ್ಯ ಹರಿಶ್ಚಂದ್ರ ಹೆಂಡ್ತಿಮಕ್ಕಳನ್ನು ಮಾರಿ ವಿಶ್ವಾಮಿತ್ರನ ಸಾಲ ತೀರಿಸಿದ, ನೀವೂ ಹಾಗೇ ಮಾಡಿ ಅಂತ ಮನೆ ಮುಂದೆ ಕೂಗಾಡಿದರು. ನಮ್ಮೂರಿನವರು ಹೆಂಡ್ತಿ ಮಕ್ಕಳನ್ನು ಮಾರುವಂತಹ ಹರಿಶ್ಚಂದ್ರರಲ್ಲ ಸಾರ್’ ತಿಮ್ಮಜ್ಜಿ ಹೇಳಿದಳು.
‘ಕುಟುಂಬದ ಯಜಮಾನನಿಗೆ ಸಾಲ ನೀಡುವ ‘ಸಾಲಲಕ್ಷ್ಮಿ’ ಯೋಜನೆ ಜಾರಿ ಮಾಡಿ ಸಂಕಷ್ಟ ನಿವಾರಣೆ ಮಾಡಲು ಸರ್ಕಾರಕ್ಕೆ ಹೇಳಿ ಸಾರ್...’ ತಿಮ್ಮಜ್ಜ ಮನವಿ ಮಾಡಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.