‘ದಿ ಪವರ್‌ಫುಲ್ ಪೀಪಲ್ ಕಮ್ ಫ್ರಂ ಪವರ್‌ಫುಲ್ ಪ್ಲೇಸಸ್’ ಕೆಜಿಎಫ್ ಸಿನಿಮಾ ಡೈಲಾಗ್ ಹೇಳುತ್ತಾ ಒಳಗೆ ಬಂದಳು ಹೆಂಡತಿ.
‘ಯೂ ಆರ್ ರಾಂಗ್, ಪವರ್‌ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್‌ಫುಲ್, ಅಂದ್ರೆ ನನ್ನಂಗೆ’ ಎಂದೆ ಪ್ರಕಾಶ್‌ರಾಜ್ ಸ್ಟೈಲ್‌ನಲ್ಲಿ.
‘ನೀವು ಪವರ್‌ಫುಲ್ಲಾ’ ಜೋರಾಗಿ ನಕ್ಕಳು.
‘ನಿಜಕ್ಕೂ ನಾನು ಪವರ್‌ಫುಲ್ ಕಣೆ. ಒಂದೊಂದು ಪ್ಲೇಸ್‌ಗೆ ಹೋದಾಗ ಒಂದೊಂದು ಪೊಸಿಷನ್‌ಗೆ ಏರ್ತೀನಿ ಗೊತ್ತಾ ನಾನು!’
‘ಹೌದಾ, ಅದ್ಹೆಂಗೆ?’
‘ಮೊನ್ನೆ ವಿಜಯಪುರಕ್ಕೆ ಹೋಗಿದ್ದೆ. ಗೋಲ್‌ಗುಂಬಜ್ ಮುಂದೆ ನಿಂತಿದ್ದಷ್ಟೇ, ರಾಜ್ಯ ಬಿಜೆಪಿಗೆ ನಾನೇ ಅಧ್ಯಕ್ಷ ಆಗಿಬಿಟ್ಟಿದ್ದೆ’ ಎಂದೆ ಗಂಭೀರವಾಗಿ.
ನಗು ಬಂದರೂ ತಡೆದುಕೊಂಡು, ‘ಮತ್ತೆಲ್ಲಿಗೆ ಹೋದಾಗ, ಏನಾಗಿದ್ರಿ’ ಕೇಳಿದಳು ಹೆಂಡತಿ.
‘ಹೋದ ವಾರ ಕನಕಪುರಕ್ಕೆ ಹೋಗಿದ್ನಾ, ಅಲ್ಲಿನ ಸರ್ಕಲ್‌ನಲ್ಲಿ ನಿಂತಿದ್ದಷ್ಟೇ, ಎಲ್ಲರೂ ಕರ್ನಾಟಕದ ಮುಖ್ಯಮಂತ್ರಿಗೆ ಜಯವಾಗಲಿ ಎನ್ನತೊಡಗಿದರು. ಆಗಲೇ ಅರಿವಿಗೆ ಬಂದಿದ್ದು, ನಾನೇ ಸಿಎಂ ಅಂತ’ ಎಂದೆ ಗಟ್ಟಿಧ್ವನಿಯಲ್ಲಿ.
ಇದ್ಯಾಕೋ ಲೂಸ್ ಆಗಿದೆ ಅಂದುಕೊಂಡ ಹೆಂಡತಿ, ‘ಪುಣ್ಯಕ್ಕೆ ಮುಂಬೈಗೆ ಹೋಗಿಲ್ವಲ್ಲ ನೀವು’ ಎಂದಳು.
‘ಅಲ್ಲಿಗ್ಯಾಕೆ ಹೋಗಲಿ’ ಕೇಳಿದೆ ಅನುಮಾನದಲ್ಲಿ.
‘ಅಲ್ಲಿಗೆ ಹೋಗಿದ್ರೆ, ನೀವೇ ಮಹಾರಾಷ್ಟ್ರ ಸಿಎಂ ಆಗ್ತಿದ್ರೇನೋ’ ಎಂದಳು ವ್ಯಂಗ್ಯವಾಗಿ.
‘ಓಹ್ ಹೌದಲ್ವಾ, ಛೇ, ಮಹಾರಾಷ್ಟ್ರ ಮುಖ್ಯಮಂತ್ರಿ ಆಗೋ ಚಾನ್ಸ್ ಮಿಸ್ ಆಯ್ತು ನೋಡು’ ಎಂದವನೇ ಮತ್ತೇನೋ ಹೊಳೆದಂತಾಗಿ ಹೇಳ್ದೆ, ‘ನಾಳೆ ಆಸ್ಟ್ರೇಲಿಯಾಕ್ಕೆ ಹೋಗ್ತಿದೀನಿ. ಅಲ್ಲಿ ಕಾಲಿಟ್ಟ ತಕ್ಷಣ ನಾನೇ ಇಂಡಿಯನ್ ಕ್ರಿಕೆಟ್ ಟೀಂ ಕ್ಯಾಪ್ಟನ್ ಆದರೂ ಆಗಬಹುದು. ಆಗ, ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೇ ಸೆಂಚುರಿ ಹೊಡೆಯೋದೇ’ ನಿಂತಲ್ಲೇ ಬ್ಯಾಟ್ ಬೀಸತೊಡಗಿದೆ!
‘ಇದೇನ್ರೀ ಇದು, ಪೊರಕೆ ಎತ್ತಿ ಹಿಡಿದು ಅದ್ಯಾರಿಗೆ ಹಾಗೆ ತೋರಿಸ್ತಿದೀರಿ. ಹಾಸಿಗೆಯಿಂದ ಏಳ್ರೀ ಮೇಲೆ’ ಎಂದು ನೀರು ಎರಚಿದಳು ಹೆಂಡತಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.