ADVERTISEMENT

ಚುರುಮುರಿ | ಎಲೆಕ್ಷನ್ ಶುರುಕ್ಷೇತ್ರ

ಲಿಂಗರಾಜು ಡಿ.ಎಸ್
Published 20 ಫೆಬ್ರುವರಿ 2023, 22:15 IST
Last Updated 20 ಫೆಬ್ರುವರಿ 2023, 22:15 IST
   

ನಮ್ಮೂರ ಮಾರಿಹಬ್ಬಕ್ಕೆ ಎಲೆಕ್ಷನ್ ಶುರುಕ್ಷೇತ್ರ ನಾಟಕ ಆಡಬಕು ಅಂತ ತೀರ್ಮಾನ ಆಗಿತ್ತು. ನಾಟಕದಲ್ಲಿ ಕೈರಾಜ, ಕಮಲನಾಭ, ತೆನೆರಾಯ ಅನ್ನೋವು ಮೂರೇ ಪಾತ್ರ ಇದ್ದೋವು. ನಾಟಕ ಸುರುವಾತು.

‘ದಂಡಿಪೆ ಬಾಲರೇ! ತಲೆಗಳ ಮೆಟ್ಟಿ, ಕುಟ್ಟಿ ಬಹುಮತವ ಗೆಲ್ವೆ’ ಸೂತ್ರಧಾರನಾದ ತೆನೆರಾಜ ಬಂದು ಗರ್ಜಿಸಿ ಹೋದ.

‘ಟೆಂಡರಾಭರಣ, ಕ್ಯಾಶು ಹರಣ, ವಂದಿಪೆ ನಿನಗೆ ಪರ್ಸೆಂಟೇಜ್ ಸಿರಿಯೇ’ ಹಾಡುತ್ತಾ ಬಂದ ಕೈರಾಜ ಕಮಲನಾಭನ ಕಂಡು ‘ತರಾತುರಿಯಲ್ಲಿ ಟೆಂಡರು ನುಂಗುತ್ತಾ ಸಾಲಕ್ಷೇಪದಲ್ಲಿ ತೊಡಗಿರುವ ನೀನು ಧಾರೈ ಸಾರಥಿ, ನಿನ್ನ ಮುಖಕ್ಕೆ ಮಂಗಳಾರತಿ’ ಅಂದ.

ADVERTISEMENT

‘ತಲೆ ಸರಿಯಿಲ್ಲದವರ ಮಾತು ಕೇಳಿ ಮನಸ್ಸು ಪರಿತಪಿಸುತ್ತಿದೆ. (ಹಾಡು) ಅನೀತಿಯಲಿ ಬಲು ಮಾತನಾಡಿ ಘಾತಿಸುವೆಯೇಕೆ, ತರವೆನಿಸದು ಛೀ ದುರುಳ. ಕಟ್ಟುಕಥೆಗಳ ಕುಟ್ಟುತ ಬರುವೆಯ. ಬಿಗಿದು ಸಿಗಿದುಬಿಡುವೆ’ ಅಂದ ಕಮಲನಾಭ.

‘ನಿನ್ನ ಕೇಸರಿ ಬಾಣಕ್ಕೆ ತ್ರಾಣವೆಲ್ಲಿದೆ? ನಮಗೆ ರಾಜ್ಯ ಸಿಕ್ಕೊಡನೆಯೇ ನಿಮ್ಮ ಅಕ್ರಮಗಳನ್ನೆಲ್ಲಾ ಸೀಳಿ ಹಾಳುಗೈವೆ!’ ಅನ್ನುತ್ತಾ ಕೈರಾಜ ಎದೆ ಬಡಿದುಕೊಂಡ.

‘ಎಲೆಲವೋ ಧೂರ್ತ, ನಮಗೆ ಮತ ಸ್ವಾಮಿಯ ಆಶೀರ್ವಾದವಿದೆ. ನಿಮ್ಮ ಕಾಲದ ಹಗರಣಗಳನ್ನು ಮರೆತೆಯಾ? (ಹಾಡು) ಕೊಡುವುದಿಲ್ಲವೋ ರಾಜ್ಯವಾ, ಎಲೆಕ್ಷನ್ ರಣದೊಳ್ ಜೈಸಿ ಗೆಲ್ವೇ ನಾಂ ರಾಜ್ಯವ, ಹರಟೆಯ ಬಿಡು ಮರುಳಾ’ ಕಮಲನಾಭ ತೊಡೆ ತಟ್ಟಿದ.

‘ಅಧಿಕಾರ ಲುಪ್ತವಾಗಿ ಸಿರಿಸಂಪದ ಬರಿದಾಗಿ ನೊಂದಿರುವ ಎಮಗೆ ಒಂದು ಟೆಂಡರನ್ನೂ ಕೊಡದ ಕಪಟಿಯೇ, ನಿನ್ನ ಮರುಳು ಮಾತಿಗೆ ಮತಸ್ವಾಮಿಯು ಭ್ರಾಂತನಾಗನು. ನಮ್ಮನ್ನು ಹೊಡೆಯುವ ಸಂಭ್ರಮವೇಕೆ? ಬಾರೆಲೋ ಹೇಡೀಯೆ ನೀಂ’ ಅಂದ ಕೈರಾಜ.

ಇವರಿಬ್ಬರ ಕಪಟನಾಟಕ ನೋಡುತ್ತಿದ್ದ ನಮ್ಮೂರ ಮತರಾಯ ‘ಅನುದಿನ ನಿಮ್ಮ ನಂಬಿದ್ದೆನಾಂ, ಮತದಾರರಾದ ಎಮ್ಮ ಅನುದಿನ ಕೆರಳಿಸುವ ನಿಮ್ಮ ದುರಾವೇಶಗಳ ತೊರೆಸಿ ಧ್ವಂಸಗೈವೆ’ ಅಂತ ಎದ್ದೇಟಿಗೆ ಪಾತ್ರಧಾರಿಗಳು ಹೆದರಿ ಪಲಾಯನ ಗೈಯ್ಯಲಾಗಿ ನಾಟಕ ಕೊನೆಯಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.