ADVERTISEMENT

ಚುರುಮುರಿ: ಎಲೆಕ್ಷನ್ ಸ್ಪೆಷಲ್!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 19:30 IST
Last Updated 23 ಅಕ್ಟೋಬರ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಸ್ತೆಯಲ್ಲಿ ನನ್ನನ್ನು ನೋಡುತ್ತಿದ್ದಂತೆ ಮಾಸ್ಕನ್ನು ಮುಖದ ತುಂಬಾ ಎಳೆದುಕೊಂಡು, ಕಣ್ತಪ್ಪಿಸಿ ಹೋಗಲೆತ್ನಿಸುತ್ತಿದ್ದ ಗೆಳೆಯನನ್ನು ಹಿಡಿದು ನಿಲ್ಲಿಸಿ ಕೇಳಿದೆ- ‘ನನ್ನ ಕೋವಿಡ್ ಟೆಸ್ಟ್ ನೆಗೆಟಿವ್ ಬಂತು ಕಣಯ್ಯ, ಹೆದ್ರುಕೋಬೇಡ... ಕುದುರೆ ಮೇಲೆ ಕೂತಂತಿದೆ, ಎಲ್ಲಿಗೆ ಪಾದ ಬೆಳೆಸ್ತಿದೆ ಸವಾರಿ?’

‘ಅಪಶಕುನ, ಒಳ್ಳೆ ಕೆಲಸಕ್ಕೆ ಹೋಗೋವಾಗ ಎಲ್ಲಿಗೇಂತ ಕೇಳ್ತಾರೇನೋ?’ ಎನ್ನುತ್ತಾ ರಾಂಗ್ ಆದ.

‘ಸಾರಿ ಕಣಯ್ಯ, ಆದ್ರೆ ನೀನು ಒಳ್ಳೇ ಕೆಲಸಕ್ಕೆ ಹೋಗ್ತಿದ್ದೀಯ ಅನ್ನೋದೇನು ನಿನ್ನ ಮುಖದ ಮೇಲೆ ಬರೆದಿದೆಯೇ? ಏನೋ ಅಂಥ ಘನಂದಾರಿ ಕೆಲ್ಸ?’

ADVERTISEMENT

‘ಮುಂದಿನ ವಾರ ಗ್ರ್ಯಾಜುಯೇಟ್ ಕ್ಷೇತ್ರದ ಎಂಎಲ್ಸಿ ಚುನಾವಣೆಯಲ್ವೇ? ನಮ್ಮ ಕ್ಯಾಂಡಿಡೇಟ್ ಬಂದಿದಾರೆ. ಗಣಪತಿ ಗುಡೀಲಿ ಪೂಜೆ ಮುಗಿಸ್ಕೊಂಡು ಮತದಾರರ ಭೇಟಿಗೆ ಹೋಗ್ಬೇಕು’.

‘ಅವರು ಕೌನ್ಸಿಲ್‌ಗೆ ನಾಮಕರಣ ಮಾಡಿಸಿಕೊಳ್ತಾರೇಂತ ಹೇಳ್ತಿದ್ದೆಯಲ್ಲೋ’.

‘ಆಗಲಿಲ್ಲವಂತೆ, ಆಗದಿದ್ದೇ ಒಳ್ಳೇದಾಯ್ತು. ನೋಡು, ಹಕ್ಕಿಹಳ್ಳಿ ಲೋಕೇಶಣ್ಣ ನಾಮಕರಣ ಎಂಎಲ್ಸಿ ಆಗಿ ಏನು ಖುಷಿಯಾಗಿದಾರೆ!’

‘ನಿಮ್ಮ ಚುನಾವಣಾ ಪ್ರಣಾಳಿಕೆ ಏನಯ್ಯಾ?’

‘ನಿರುದ್ಯೋಗಿ ಪದವೀಧರರಿಗೆ ಭತ್ಯೆ, ಕೋವಿಡ್ ಲಸಿಕೆ ಉಚಿತ ವಿತರಣೆ’.

‘ಬಿಹಾರ ಚುನಾವಣೆಯ ಕಮಲ ಪಕ್ಷದ ಪ್ರಣಾಳಿಕೆ ಕಾಪಿ ಹೊಡ್ದಿದ್ದೀರಿ... ಇವೆಲ್ಲ ಚುನಾವಣೆ ನಂತ್ರ. ಅದ್ಕೂ ಮೊದ್ಲು ಏನಾದರೂ ವಿಶೇಷವಾದ್ದು, ಅಮೆರಿಕ ಚುನಾವಣೇಲಿ ಭಾರತೀಯ ಮೂಲದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಮಾಡಿದಂತೆ ಮಾಡೋದಲ್ವೇ?’

‘ಅವರು ಏನ್ ಮಾಡಿದಾರಯ್ಯಾ?’

‘ಮತದಾರರನ್ನ ಓಲೈಸೋಕೆ ಮಳೇಲಿ ರೈನ್ ಡ್ಯಾನ್ಸ್ ಮಾಡಿದಾರೆ!’

‘ನಮ್ಮ ಮತದಾರರು ಇಂಥದ್ದಕ್ಕೆಲ್ಲ ಮರುಳಾಗ್ತಾರಾ?! ಅವ್ರನ್ನ ಓಲೈಸೋಕೆ ಇಲ್ಲಿದೆ ನೋಡು ಸ್ಯಾಂಪಲ್ಲು...’

ಅವನು ಪ್ಯಾಂಟಿನ ಒಂದು ಜೇಬಿನಿಂದ ಬೆಳ್ಳಿಬಾರ್ಡರ್ ಮಾಸ್ಕನ್ನು, ಇನ್ನೊಂದರಿಂದ ಕುಂಕುಮದ ಭರಣಿಯನ್ನು ತೆಗೆದು ತೋರಿದಾಗ, ನನ್ನ ತೆರೆದ ಬಾಯಿ ಮುಚ್ಚಿಕೊಳ್ಳಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.