ADVERTISEMENT

ಎಫ್.ಎಂ. ಗುಳಿಗೆ!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 19:31 IST
Last Updated 16 ಅಕ್ಟೋಬರ್ 2020, 19:31 IST
ಚುರುಮುರಿ
ಚುರುಮುರಿ   

ಗೃಹ ಸದನದಲ್ಲಿ ಹಬ್ಬದ ಬಜೆಟ್ ಚರ್ಚೆ ಭರದಿಂದ ಸಾಗಿತ್ತು. ‘ಈ ಕೊರೊನಾ ಕಾಟದಿಂದ ಪಂಚಮಿ, ವರಮಹಾಲಕ್ಷ್ಮಿ, ಗೌರಿ ಹಬ್ಬಕ್ಕೆ ಏನೂ ತಗೊಳ್ಲಿಲ್ಲ‌. ಈ ದಸರಾ-ದೀಪಾವಳಿಗೆ ನಿರ್ಮಲಾ ನೆಕ್ಲೇಸ್ ತಗೊಳ್ಳೋಣಾಂತ’ ಎಂದಳು ಚಿನ್ನಮ್ಮ.

ಬೆರಗಾದ ಚಿಕ್ಕೇಶಿ ಕೇಳಿದ, ‘ನಂಗೆ ಲಾಂಗ್ ನೆಕ್ಲೇಸ್, ಡೈಮಂಡ್ ನೆಕ್ಲೇಸ್ ಗೊತ್ತು, ಇದ್ಯಾವುದು ಹೊಸದು?’

‘ನಮ್ಮ ಎಫ್ಎಂ ಮೇಡಂ ನಿರ್ಮಲಾರ ಹೆಸರಿನದೂರಿ. ದೇಶದ ಹಣಕಾಸು ಸ್ಥಿತಿ ಸುಧಾರಣೆಗೆ ನಾವು ಹೆಚ್ಚೆಚ್ಚು ಖರ್ಚು ಮಾಡಲು ಅವ್ರು ಎಷ್ಟೊಂದು ಪ್ರೋತ್ಸಾಹಿಸ್ತಿದಾರೆ... ರಾಜ್ಯಗಳಿಗೆ ಸಾವಿರಾರು ಕೋಟಿ ಕೊಡ್ತಿದಾರೆ’.

ADVERTISEMENT

‘ಅದ್ಕೇನಾ ಈಚೆಗೆ ಜೇಬಿಗೆ ಸಿಕ್ಕಾಪಟ್ಟೆ ಕತ್ತರಿ ಬೀಳ್ತಿರೋದು? ನಿಮ್ಮ ಎಫ್ಎಂ, ಕೋವಿಡ್‌ಗೆ ದೇವರು ಕಾರಣಾಂತ ಹಿಂದೆ ಹೇಳಿದಂತೆ ಈಗಿನ ಆರ್ಥಿಕ ದುಃಸ್ಥಿತಿಗೂ ಅವ್ನನ್ನು ದೂರ್ತಿಲ್ವಲ್ಲ’.

‘ಹಂಗ್ಯಾಕ್ರೀ ಹಂಗಿಸ್ತೀರಿ, ಅವರು ನಿಮಗೆ ಬಡ್ಡಿ ಇಲ್ಲದೆ ಮುಂಗಡ, ಪ್ರವಾಸ ರಜಾ ಭತ್ಯೆ ಬದ್ಲು ಹಬ್ಬದ ಗಿಫ್ಟ್ ವೋಚರ್ ಕೊಡ್ತಿಲ್ವೇ?’

‘ಅವರದ್ದು ಚಾರ್ವಾಕ ನೀತಿ’

‘ಅಂದ್ರೆ?’

‘ಯಾವಜ್ಜೀವೇತ್ಸುಖಂ ಜೀವೇತ್/ಋಣಂ ಕೃತ್ವಾ ಘೃತಂ ಪಿಬೇತ್’- ಅಂದ್ರೆ ಇರೋವರೆಗೂ ಮಜವಾಗಿರಿ, ಸಾಲ ಮಾಡಿಯಾದರೂ ತುಪ್ಪ ತಿನ್ನೀಂತ... ಈ ಹಣದಲ್ಲಿ ವಾಷಿಂಗ್ ಮಷೀನ್ ತಗೊಳ್ಳೋಣ’.

‘ಬೇಡ, ನೀವು ವರ್ಕ್ ಫ್ರಮ್ ಹೋಮ್ ಮಾಡ್ತಾ ಮನೇಲೇ ಇರ್ತೀರಲ್ಲ. ವಾಷಿಂಗ್ ಮಷೀನ್, ಡಿಷ್ ವಾಷರ್ ಏನೂ ಬೇಡ’.

‘ನಿಮ್ಮ ಮೇಡಮ್ ಅವರದ್ದು ಚಾಣಕ್ಯ ನೀತಿಯೂ ಹೌದು. ಒಂದು ಕೈಲಿ ಕೊಟ್ಟದ್ದನ್ನು ಇನ್ನೊಂದ್ರಲ್ಲಿ ಕಿತ್ಕೊಳ್ಳೋದು’.

‘ಬಿಡ್ಸಿ ಹೇಳ್ರಿ’.

‘ಇದಕ್ಕೆಲ್ಲಾ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ಜಿಎಸ್‌ಟಿ ಸಾಮಾನುಗಳ್ನೇ ಕೊಂಡುಕೊಳ್ಳಬೇಕು. ಈ ಟ್ಯಾಕ್ಸ್‌ಗಳೆಲ್ಲಾ ಸೇರೋದು ಎಫ್ಎಂ ಖಜಾನೆಗೇ ತಾನೇ?’

‘ಇದೊಂದು ರೀತಿ ಸಿಹಿ ಲೇಪಿತ ಕ್ವಿನೈನ್ ಗುಳಿಗೆ ಅನ್ನಿ’ ಅನ್ನುತ್ತಲೇ ಚಿನ್ನಮ್ಮ ಮೊಬೈಲ್‌ನಲ್ಲಿ ‘ಹಲೋ, ಸಿಟಿ ಜ್ಯುಯೆಲರಿ ಶಾಪ್...’ ಎನ್ನುತ್ತಿದ್ದಂತೆ ಚಿಕ್ಕೇಶಿಯ ಕೈ ತಲೆ ಮೇಲೆ ಹೋಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.