ADVERTISEMENT

ಸಂಕ್ರಾಂತಿ ಸಂಕಷ್ಟ

ಮಣ್ಣೆ ರಾಜು
Published 15 ಜನವರಿ 2020, 20:00 IST
Last Updated 15 ಜನವರಿ 2020, 20:00 IST
ಚುರುಮುರಿ
ಚುರುಮುರಿ   

ಗುರೂಜಿ ಪಂಚಾಂಗ ಬಿಚ್ಚಿ ಏನನ್ನೋ ಲೆಕ್ಕ ಹಾಕುತ್ತಿದ್ದರು. ಶಾಸಕರ ಪತ್ನಿ ಕೋಪದಿಂದ ಬಿರುಗಾಳಿಯಂತೆ ಬಂದರು. ಗುರೂಜಿ ಗಾಬರಿಯಾದರು.

‘ಗುರೂಜಿ, ಧನುರ್ಮಾಸ, ಸಂಕ್ರಾಂತಿ ಮುಗಿದರೆ ನನ್ನ ಪತಿ ಮಂತ್ರಿಯಾಗುತ್ತಾರೆ ಎಂದು ಹೇಳಿದ್ರಿ. ಎಲ್ಲಾ ಮುಗಿದರೂ ಮಂತ್ರಿಯೋಗದ ಲಕ್ಷಣ ಕಾಣ್ತಿಲ್ಲ...’ ಶಾಸಕರ ಪತ್ನಿಗೆ ಸಿಟ್ಟು, ಸಂಕಟ.

‘ಖಂಡಿತ ನಿಮ್ಮ ಪತಿಗೆ ಮಂತ್ರಿ ಯೋಗ ಇದೆ. ಆದರೆ, ಯೋಗ ದಯಪಾಲಿಸಬೇಕಾದ ಡೆಲ್ಲಿ ದೇವರು ದರ್ಶನಕ್ಕೂ ಸಿಗುತ್ತಿಲ್ಲ, ಮೆರವಣಿಗೆಗೂ ಬರುತ್ತಿಲ್ಲ’ ನೆಪ ಹೇಳಿದರು.

ADVERTISEMENT

‘ದೇವರು ಬ್ಯುಸಿನಾ?’

‘ಹಾಗಲ್ಲ ತಾಯಿ, ಭಕ್ತರ ಕಷ್ಟಗಳನ್ನು ಮೈಮೇಲೆ ಎಳೆದುಕೊಂಡು ದೇವರು ಕಷ್ಟಕ್ಕೆ ಸಿಕ್ಕಿದೆ. ಸಾಲದ್ದಕ್ಕೆ, ಜಾರ್ಖಂಡ್ ಎಲೆಕ್ಷನ್ ಮುಖಭಂಗ, ದೆಹಲಿ ಚುನಾವಣೆ ಆತಂಕ, ಸಿಎಎ ಸಂಕಟ ದೇವರನ್ನು ಕಾಡಿ ಕಂಗೆಡಿಸಿವೆ’.

‘ಪಾಪ...! ದೇವರ ಸಂಕಷ್ಟ ನಿವಾರಣೆಗೆ ನಾವು ವ್ರತ-ಗಿತ ಮಾಡಬೇಕಾ ಗುರೂಜಿ?’

‘ಸ್ವಲ್ಪ ದಿನ ತಾಳ್ಮೆ, ಸಹನೆ, ಮೌನ, ಧ್ಯಾನವನ್ನು ಆಚರಿಸಿ, ನಿಮಗೂ ದೇವರಿಗೂ ಒಳ್ಳೆಯದಾಗುತ್ತದೆ’.

‘ಶಾಸಕರು ಬೇಗ ಮಂತ್ರಿಯಾಗಲಿ ಎಂದು
ಕ್ಷೇತ್ರದ ಕೆಲ ಕಾರ್ಯಕರ್ತರು ಡೆಲ್ಲಿ ದೇವ್ರಿಗೆ
ಮುಡಿ ಕೊಡ್ತೀವಿ ಅಂತ ಹರಕೆ ಮಾಡಿ
ಕೊಂಡಿದ್ದಾರೆ. ತೊಂದರೆ ಇಲ್ವಾ ಗುರೂಜಿ?’

‘ತೊಂದರೆ ಇಲ್ಲ, ಕೊಡಲಿಬಿಡಿ, ಮತ್ತೆ ಕೂದಲು ಬೆಳೆಯುತ್ತದೆ ಹೆಹ್ಹೆಹ್ಹೆ...’

‘ನಾನು ಮಂತ್ರಿ ಹೆಂಡತಿಯಾಗುವುದು ಯಾವಾಗ ಅಂತ ಖಚಿತವಾಗಿ ಹೇಳಿಬಿಡಿ ಗುರೂಜಿ’.

‘ಆಗ್ತೀರಿ, ಈ ಬಾರಿ ನನ್ನ ಭವಿಷ್ಯ ಸುಳ್ಳಾಗು
ವುದಿಲ್ಲ. ಗ್ರಹಣ, ಹರಣ, ಸಂಕ್ರಮಣ ಎಲ್ಲಾ ಮುಗಿದಿದೆ. ಯುಗಾದಿ ವೇಳೆಗೆ ನಿಮ್ಮ ಮನೆ ಮುಂದೆ ಮಂತ್ರಿ ಕಾರು ನಿಲ್ಲುತ್ತದೆ. ನೀವು ತೋರಣ ಕಟ್ಟಿ, ಹೂರಣ ಕುಟ್ಟಿ ಆನಂದವಾಗಿ ಹಬ್ಬ ಆಚರಿಸಬಹುದು...’ ಎಂದು ಹೇಳಿ, ಶಾಸಕರ ಪತ್ನಿಯನ್ನು ಸಾಗಹಾಕಿ ಗುರೂಜಿ ನಿಟ್ಟುಸಿರುಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.