ADVERTISEMENT

ಚುರುಮುರಿ: ‘ಮಾರ್ಕ್ಸ್’ ವಾದ!

ಚಂದ್ರಕಾಂತ ವಡ್ಡು
Published 31 ಮೇ 2022, 19:30 IST
Last Updated 31 ಮೇ 2022, 19:30 IST
ಚುರುಮುರಿ
ಚುರುಮುರಿ   

ತಿಂಗಳೇಶ ಸ್ನಾನ ಮುಗಿಸಿ ಬರುವುದನ್ನೇ ಕಾಯ್ತಿದ್ದ ಮಡದಿ ಬಹಳ ಉತ್ಸಾಹದಿಂದಿದ್ದಳು: ‘ರೀ... ಬದ್ರಿ ಫೋನ್ ಮಾಡಿದ್ರು. ಅರ್ಜೆಂಟಾಗಿ ಅವರ ಮನೆಗೆ ಹೋಗಬೇಕಂತೆ’.

‘ಯಾಕೆ? ಸಾಲ ವಾಪಸ್ ಕೊಡ್ತಾನಂತೇನು?’

‘ಅದ್ಕ ಇರ್ಬೇಕು. ಜಲ್ದೀ ಹೋಗಿ ಇಸಗೊಂಡು ಬರ್‍ರಿ’ ಹೆಂಡತಿ ಆಸೆ ಹುಟ್ಟಿಸಿ ಅವಸರಿಸಿದಳು.

ADVERTISEMENT

ದೆಹಲಿ ವಿಮಾನ ಏರುವ ಸಚಿವಾಕಾಂಕ್ಷಿ ಶಾಸಕನಂತೆ ಅದೆಷ್ಟನೇ ಸಾರಿಯೋ ಬದ್ರಿ ಮನೆ ಕಡೆ ವಸೂಲಿಗೆ ಹೊರಟ ತಿಂಗಳೇಶ. ‘ಈ ಸಲನೂ ಸಿಎಮ್ಮರಂತೆ ಬರಿಗೈಯಲ್ಲಿ ಬರಬಾರದು ನೋಡ್ರಿ’ ಎಂದು ಹೆಂಡತಿ ಎಚ್ಚರಿಸಿದಳು.

ಬದ್ರಿ ಮನೆಯಲ್ಲಿ ಐ.ಟಿ. ರೇಡ್ ಮೌನ ಆವರಿಸಿತ್ತು. ತಿಂಗಳೇಶನ ಆಗಮನವನ್ನೂ ಗಮನಿಸದೆ ತಲೆಗೆ ಕೈಹೊತ್ತು ಕುಳಿತಿದ್ದರು ಬದ್ರಿ ದಂಪತಿ. ಕೋಣೆಯೊಳಗಿನಿಂದ ದುಃಖಿಸುವ ದನಿ. ಸಾಲ ಮರುಪಾವತಿ ಸುಳಿವೇ ಇಲ್ಲ. ತಿಂಗಳೇಶನೇ ಮೌನ ಮುರಿದ: ‘ಏನಾಯ್ತು?’

‘ಎಸ್ಎಸ್ಎಲ್‌ಸಿಯಲ್ಲಿ 80 ಪರ್ಸೆಂಟ್ ತಗೊಂಡು ಅಳಕೋತ ಕುಂತಾನ ನನ್ನ ಮಗ’.

‘ಅರೆ... ಡಿಸ್ಟಿಂಕ್ಷನ್ ತೊಗೊಂಡ್ರೂ ಅಳೋದೆ? ಎಂಥಾ ಕಾಲ, ಎಂಥಾ ಹುಡುಗ್ರು!’

‘30 ತೊಗೊಂಡಿದ್ರೆ ರಾಜಕೀಯಕ್ಕೆ, 60 ತೊಗೊಂಡಿದ್ರೆ ಇಂಜಿನಿಯರಿಂಗ್, 90 ಆಗಿದ್ರೆ ಮೆಡಿಕಲ್‌ಗೆ ಸೇರಿಸಬಹುದಿತ್ತು, ಈಗ ಅತ್ಲಾಗೂ ಇಲ್ಲ, ಇತ್ಲಾಗೂ ಇಲ್ಲ’ ಅಪ್ಪನ ಆಲೋಚನೆ ಥರ್ಟಿ, ಸಿಕ್ಸ್‌ಟಿ, ನೈಂಟಿ ಸುತ್ತಲೇ ಗಿರಕಿ!

‘ಹೇಳೋಕಷ್ಟೇ ಬಲಪಂಥೀಯ ಸರ್ಕಾರ, ಮಾಡೋದೆಲ್ಲಾ ಎಡಪಂಥೀಯ ನಿರ್ಧಾರ!’ ರಾಮಭಕ್ತ ಬದ್ರಿಯನ್ನು ಕೆಣಕಲು ಒಂದು ರಾಮಬಾಣ ಬಿಟ್ಟ ತಿಂಗಳೇಶ.

‘ಅದೇನು ಹಂಗೇಳ್ತೀಯಾ... ಪಠ್ಯಪುಸ್ತಕಗಳೆಲ್ಲಾ ಬಲಮುಖಿ ಪರಿಷ್ಕರಣೆ ಆಗ್ತಿವೆ’.

‘ಪುಸ್ತಕಗಳು ಎಷ್ಟೇ ಪರಿಷ್ಕರಣೆ ಆದ್ರೂ ವಿದ್ಯಾರ್ಥಿಗಳಿಗೆ ಪ್ರಯೋಜನವಿಲ್ಲ. ಕೊನೆಗೆ ನಿಲ್ಲೋದು ‘ಮಾರ್ಕ್ಸ್’ ವಾದ, ಗೆಲ್ಲೋರು ‘ಮಾರ್ಕ್ಸ್’ ವಾದಿಗಳು!

‘ಹೌದು, ಪಠ್ಯದೊಳಗೆ ಹೆಡಗೇವಾರ್, ಸಾವರ್ಕರ್ ಯಾರೇ ಬಲಗಡೆಯಿಂದ ಎಂಟ್ರಿ ಕೊಟ್ರೂ ವಿದ್ಯಾರ್ಥಿಗಳಿಗೆ, ಪೋಷಕರಿಗೆ ‘ಮಾರ್ಕ್ಸ್’ ಬಿಟ್ಟರೆ ಗತಿಯಿಲ್ಲ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.