ADVERTISEMENT

ಚುರುಮುರಿ | ಸುದ್ದಿಗೆ ಗುದ್ದು

ಸುಮಂಗಲಾ
Published 19 ಮೇ 2024, 22:30 IST
Last Updated 19 ಮೇ 2024, 22:30 IST
   

ಬೆಕ್ಕಣ್ಣ ಸುದ್ದಿ ಓದುತ್ತ ಮುಸಿಮುಸಿ ನಗುತ್ತಿತ್ತು.

‘ನೀ ಹಿಂಗೆ ನಗೋ ಅಂಥದ್ದು ಏನೈತಲೇ ಅದ್ರಾಗೆ?’ ಎಂದೆ ಕುತೂಹಲದಿಂದ.

‘ಒಂದಲ್ಲ, ಎರಡು ಸುದ್ದಿ ಅದಾವು. ಮೊದಲ್ನೇದ್ದು… ಯಾರೋ ಡಾಕ್ಟರು ನಾಲ್ಕು ವರ್ಷದ ಮಗುವಿನ ಕೈ ಆಪರೇಷನ್‌ ಮಾಡೋದ್ರ ಬದಲಿಗೆ ನಾಲಿಗೆ ಆಪರೇಷನ್‌ ಮಾಡಿದ್ರಂತೆ’ ಬೆಕ್ಕಣ್ಣ ನಗುತ್ತಲೇ ಹೇಳಿತು.

ADVERTISEMENT

‘ಕೈ ಬದಲಿಗೆ ನಾಲಿಗಿ ಆಪರೇಷನ್‌ ಮಾಡ್ತಾರ
ಅಂದ್ರೆ ಎಷ್ಟ್‌ ಗಂಭೀರ ವಿಷಯ… ನಗೂದು ಬಿಡಲೇ. ಆ ಡಾಕ್ಟ್ರು ಎಲ್ಲ ಸರಿಯಾಗಿದ್ದ ನಾಲಿಗೆಗೆ
ಅದೇನು ಆಪರೇಷನ್‌ ಮಾಡಿದ್ರು ಅಂತ! ಆಪ
ರೇಷನ್‌ ಮಾಡೂಮುಂದ ಎದಕ್ಕ ಮಾಡಾಕ
ಹತ್ತೀನಿ ಅಂತ ಜರಾ ಗ್ಯಾನ ಬ್ಯಾಡೇನು?’

‘ಅದೇ ನನಗೂ ವಿಚಿತ್ರ ಎನ್ನಿಸತೈತಿ. ಖರೇ
ಅಂದ್ರೆ ನಾಲಿಗೆ ಆಪರೇಷನ್‌ ಮಾಡಬೇಕಾಗಿದ್ದುದು ಆ ಮಗುವಿಗಲ್ಲ… ನಮ್ಮ ರಾಜಕೀಯ ನಾಯಕರಿಗೆ! ಮಗುವಿನ ನಾಲಿಗೆ ಆಪರೇಷನ್‌ ಮಾಡಿ ಅನುಭವ ತಗಂಡ್ಯಲ್ಲ, ಈಗ
ರಾಜಕಾರಣಿಗಳ ನಾಲಿಗೆ ಆಪರೇಷನ್‌ ಮಾಡಪಾ ಅಂತ ಡಾಕ್ಟರಿಗೆ ಹೇಳಬಕು’ ಬೆಕ್ಕಣ್ಣ ಮತ್ತೆ ಮುಸಿಮುಸಿ ನಕ್ಕಿತು.

‘ಜೋರಾಗಿ ಹೇಳಬ್ಯಾಡಲೇ. ಮತ್ತ ನಿನ್ನ, ನನ್ನ ಕೂಡೇ ಜೈಲಿಗೆ ಹಾಕತಾರೆ. ರಾಜಕಾರಣಿಗಳಿಗೆ ನಾಲಿಗೆಯೇ ಅಸ್ತ್ರ, ನಾಲಿಗೆಯೇ ಶಸ್ತ್ರ… ಮನಸ್ಸಿಗೆ ಬಂದಂಗೆ ಝಳಪಿಸೂದು ಅವರ ಹಕ್ಕು ಅಂದ್ಕೊಂಡಾರೆ. ಸರಿ, ಇನ್ನೊಂದು ಸುದ್ದಿ ಏನು’ ಕೇಳಿದೆ.

‘ನಮ್‌ ನಂದಿನಿಯವರು ಟಿ-20ಗೆ ಸ್ಕಾಟ್ಲೆಂಡ್‌, ಐರ್ಲೆಂಡ್‌ ತಂಡಕ್ಕೆ ಪ್ರಾಯೋಜಕತ್ವ ವಹಿಸ್ಯಾರೆ’.

‘ಇದು ಖುಷಿ ಸುದ್ದಿ ಕಣಲೇ! ನಂದಿನಿ ಲೋಗೊ ಇರೋ ಜೆರ್ಸಿ ಹಾಕ್ಕಂಡು ಆ ತಂಡಗಳು ಆಡತಾವೆ, ನಮ್‌ ನಂದಿನಿ ಬ್ರ್ಯಾಂಡ್‌ ಇಡೀ ವಿಶ್ವಕ್ಕೆ ತಿಳಿತೈತಿ’.

‘ಮದ್ಲು ನಮ್ಮ ಹೈನುಗಾರರಿಗೆ ಛಲೋ ಸವಲತ್ತು ಕೊಟ್ಟಮೇಲೆ ಇವೆಲ್ಲ ಮಾಡಬೇಕಪ್ಪ. ಸ್ಪಾನ್ಸರ್‌ ಮಾಡೋದೇ ಇದ್ರೆ ನಮ್‌ ದೇಶದ ಆಟಗಾರರಿಗೆ ಕೊಡಬೌದಿತ್ತು… ಮನೆ ಬೆಕ್ಕಿಗೆ ಹಾಲು ಹಾಕಕ್ಕೆ ಅಳತೀರಿ, ವಿದೇಶಿ ಬೆಕ್ಕುಗಳಿಗೆ ಬೆಣ್ಣೆಯನ್ನೇ ತಿನ್ನಿಸ್ತೀರಿ’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.