ADVERTISEMENT

ಚುರುಮುರಿ: ರಾಜಕೀಯ ಡಂಕಿಗಳು

ಲಿಂಗರಾಜು ಡಿ.ಎಸ್
Published 26 ಫೆಬ್ರುವರಿ 2024, 23:30 IST
Last Updated 26 ಫೆಬ್ರುವರಿ 2024, 23:30 IST
   

‘ಮನ್ನೆ ಒಬ್ಬರು ಟಿಕೇಟಿಗೋಸ್ಕರ ಎರಡು ಪಕ್ಷ ಬದ್ಲಾಸಿ ಮೂಲ ಪಕ್ಷಕ್ಕೆ ವಾಪಾಸ್ ಬಂದ ಮ್ಯಾಲೆ, ಪಕ್ಷ ಬುಟ್ಟೋಗಿದ್ದಕ್ಕೆ ಪಶ್ಚಾತ್ತಾಪ ಪಡ್ತಾವರಂತೆ!’ ಅಂತಂದ ಚಂದ್ರು.

‘ಇನ್ನು ಎಲೆಕ್ಷನ್ ಬಂತಲ್ಲ, ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಸೊಸೆ ಕಡೆಗೆ ಬೇಲಿ ಹಾರೋ ಮಲ್ಲಾಗರು ಸುರುವಾಯ್ತದೆ. ಈವತ್ತಿನ ಎಲೆಕ್ಷನ್ನಲ್ಲಿ ವಡ್ಡ ಮತದಾನದ ಭಯ ಅದಂತೆ. ಪಕ್ಷಾಂತರಕ್ಕೆ ಬೇರೆ ಏನನ್ನಾ ಹೆಸರು ಕೊಡಿ ಸಾ’ ಅಂತ ಕೊರೆದೆ.

‘ಮಧ್ಯಮ ವರ್ಗದ ಪಾಪದ ಜನ ಬದುಕು ಹುಡುಕಿಕೊಂಡು ಪಾಸ್‍ಪೋರ್ಟು, ವೀಸಾ ಇಲ್ಲದೇ ಕಳ್ಳತನದಲ್ಲಿ ದೇಸದ ಗಡಿಗಳನ್ನ ದಾಟಿ ದೇಸಾಂತರ ಹೋಯ್ತರೆ. ಇವರನ್ನ ಹಿಂದಿಯಲ್ಲಿ, ಪಂಜಾಬಿ ಭಾಷೆಯಲ್ಲಿ ಡಂಕಿ ಅಂತರೆ’ ತುರೇಮಣೆ ವಿಷಯದ ಗಂಟು ಬಿಚ್ಚಿದರು.

ADVERTISEMENT

‘ಕೆಲಸ ಹುಡುಕೋರು ಡಂಕಿ ಆದ್ರೆ ರಾಜಕೀಯದವುಕ್ಕೆ ಏನನ್ನಬೇಕು?’ ಅಂತು ಯಂಟಪ್ಪಣ್ಣ.

‘ಅಧಿಕಾರಕ್ಕೋಸ್ಕರ, ಸಂಪಾದನೆಗೋಸ್ಕರ ನೀತಿ ಬುಟ್ಟು ಪಕ್ಷಾಂತರ ಮಾಡೋರನ್ನ ರಾಜಕೀಯ ಡಂಕಿಗಳು ಅನ್ನಬೈದು. ‘ಅಲ್ಲಿ ಉಸಿರು ಕಟ್ಟೋ ವಾತಾವರಣ ಇತ್ತು’ ಅಂತ ಪುಂಗ್ತವೆ’ ತುರೇಮಣೆ ವಿವರಿಸಿದರು.

‘ಕರೆಕ್ಟಾಗಿ ಹೇಳಿದ್ರಿ ಸಾ. ಪಕ್ಷದಿಂದ ಪಕ್ಷಕ್ಕೆ ಕಾಲಾಡ್ಕ್ಯಂದು ಆಸ್ತಿ ಪ್ರಮಾಣವನ್ನ ಬಡಕಾಯಿ
ಸಿಕ್ಯಂದಿರತವೆ!’ ಅಂದ ಚಂದ್ರು.

‘ರಾಜಕೀಯ ಡಂಕಿಗಳು ಐದೈದು ವರ್ಸಕ್ಕೆ ಆಸ್ತಿ ಡಬಲ್ ಮಾಡಿಕ್ಯಳೋ ಸೀಕ್ರೇಟು ಏನು ಅನ್ನೋದನ್ನ ಜನಕ್ಕೆ ಹೇಳಿಕೊಟ್ಟರೆ ಬಡವರು ಬದುಕಿಕ್ಯತರಪ್ಪ’ ಅಂತು ಯಂಟಪ್ಪಣ್ಣ.

‘ಅದು ಪದವಿಯಿಂದ ಪದವಿಗೆ ಏರಿಕೊಂಡು ಹೋಗೋ ಗ್ರೇಡ್ ಸೀಕ್ರೆಟ್ ಯಂಟಪ್ಪಣ್ಣ. ಹೈಕಮಾಂಡ್ ಮುಂದೆ ಮನೋಜಯ ಆದ ಮ್ಯಾಲೆ ಹೆಸರುಬಲ ನೋಡಬಕು. ಲೇಣೆದೇಣೆ ಯವಾರ ಚುಕ್ತ ಆಗಬಕು. ಡಂಕಿಗಳನ್ನ ಕರಕಬಂದ ಏಜೆಂಟರ ರಾಜಪಾಲು, ಬಲೆಪಾಲು, ಕಮಿಷನ್ನು ಅಂತ ಬಾರಾನಮೂನೆ ಲೆಕ್ಕ ಇರತವೆ. ಇವೆಲ್ಲ ಮುಗಿದ ಮ್ಯಾಲೆ ಟಿಕೆಟ್ ಪಿಕ್ಸಾದರೆ ಮತರಾಹುಗಳಿಂದ ಬೂತುಚೇಷ್ಟೆ ಸುರುವಾಯ್ತದೆ’ ಅಂತ ವಿಷಯ ಬಿಡಿಸಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.