ADVERTISEMENT

ಅವಲಕ್ಕಿಗೂ ನಿಷೇಧ!

ಸುಮಂಗಲಾ
Published 26 ಜನವರಿ 2020, 19:45 IST
Last Updated 26 ಜನವರಿ 2020, 19:45 IST
.
.   

ಕಮಲಕ್ಕನ ಬಳಗದಲ್ಲಿ ಬಗೆಬಗೆಯ ವೀರಾಧಿವೀರರು ಹೆಚ್ಚುತ್ತಿದ್ದಾರೆ. ಅವರನ್ನೆಲ್ಲ ಇನ್ನಷ್ಟು ಪ್ರೋತ್ಸಾಹಿಸಬೇಕಿದ್ದು, ‘ಹೇಳಿಕಾ ವೀರಚಕ್ರ’ ಮತ್ತು ‘ಲಾಠಿ ವೀರಚಕ್ರ’ ಎನ್ನುವ ಎರಡು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಬೇಕೆಂಬ ಆಗ್ರಹಪತ್ರವೊಂದು ಗೃಹ ಸಚಿವಾಲಯದ ‘ಶಾ’ಣ್ಯಾರ ಮುಂದೆ ಇತ್ತು. ವರ್ಷವಿಡೀ ಕಾರ್ಯತತ್ಪರರಾದ ವೀರರ ಪಟ್ಟಿ ಬಹಳೇ ಉದ್ದವಿತ್ತು. ಡಿಸೆಂಬರ್- ಜನವರಿ ತಿಂಗಳಿನ ಹೇಳಿಕಾ ವೀರರು ಮತ್ತು ಲಾಠಿ ವೀರರನ್ನು ತತ್‍ಕ್ಷಣಕ್ಕೆ ಪರಿಗಣಿಸಬೇಕೆಂದು ಪಟ್ಟಿ ನೋಡಿದರು.

ಕಾಶ್ಮೀರದಲ್ಲಿ ಕೆಟ್ಟ ಚಿತ್ರಗಳನ್ನು ನೋಡಲಿಕ್ಕಷ್ಟೇ ಅಂತರ್ಜಾಲ ಬಳಕೆಯಾಗುತ್ತಿತ್ತು ಎಂದು ನೀತಿಪಾಠ ಒದರಿದ ನೀತಿ ಆಯೋಗದ ಸದಸ್ಯರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ತಮ್ಮ ಕ್ಷೇತ್ರವನ್ನಷ್ಟೇ ಅಲ್ಲ, ಇಡೀ ಕರುನಾಡನ್ನೇ ಕೇಸರೀಕರಣ ಮಾಡುವೆನೆಂದ ಶಾಸಕರು, ಮಂತ್ರಿಗಿರಿ ಇಲ್ಲದಿದ್ದರೂ ಪರವಾಗಿಲ್ಲ ‘ಹೇಳಿಕಾ ವೀರಚಕ್ರ’ ಕೊಡಲೇಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದರು. ಭಾರಿ ಪತ್ತೇದಾರಿಕೆ ಮಾಡಿ ‘ಅವಲಕ್ಕಿ ತಿನ್ನುವವರೆಲ್ಲ ಬಾಂಗ್ಲಾದೇಶೀಯರೆಂದು’ ಹೇಳಿದ ಕೇಸರೀಮುಖಂಡ ತನ್ನ ನಾಲಿಗೆಗೊಂದು ‘ಹೇಳಿಕಾವೀರಚಕ್ರ’ ಸಿಕ್ಕೇಸಿಗುವುದೆಂಬ ಖಾತರಿಯಲ್ಲಿದ್ದರು. ಜಾಮಿಯಾ ಮತ್ತು ಜೆಎನ್‍ಯು ವಿ.ವಿ ಒಳನುಗ್ಗಿ ತುಕಡೆ ತುಕಡೆ ಗ್ಯಾಂಗಿನವರನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರಲ್ಲಿ ಯಾರಿಗೆ ‘ಲಾಠಿ ವೀರಚಕ್ರ’ ಕೊಡಬೇಕೆಂದು ‘ಶಾ’ಣ್ಯಾರಿಗೆ ತಲೆ ಚಚ್ಚಿಕೊಳ್ಳುವಂತಾಯಿತು. ಆ ಪಟ್ಟಿ ಅಷ್ಟು ಉದ್ದವಿತ್ತು! ಬೆಂಗಳೂರಿನ ಶಾಸಕರೊಬ್ಬರ ವ್ಯಾಪ್ತಿಯ ಕೊಳೆಗೇರಿಯಲ್ಲಿ ಬಾಂಗ್ಲಾದೇಶೀಯರೆಂದುನಮ್ಮವರದೇ ಮನೆಗಳನ್ನು ನೆಲಸಮ ಮಾಡಿ,ಬದುಕು ಬೀದಿಗೆ ಬೀಳಿಸಿ ‘ಸುವರ್ಣ ಕಾರ್ಯಾಚರಣೆ’ ಮಾಡಿದ ಪೊಲೀಸರಿಗೆ ‘ಲಾಠಿ ವೀರಚಕ್ರ’ ಕೊಡಲೇಬೇಕೆಂದು ಕರುನಾಡಿನ ಕೇಸರಿ ಮುಖಂಡರ ಆಗ್ರಹ.

ಈ ಉದ್ದಾನುದ್ದ ಪಟ್ಟಿ ತಲೆ ತಿನ್ನತೊಡಗಿ, ಹೊಟ್ಟೆಯೂ ತಾಳಹಾಕತೊಡಗಿ, ಬೆಳಗಿನ ತಿಂಡಿಗೆಂದು ‘ಶಾ’ಣ್ಯಾರು ಡೈನಿಂಗ್ ಹಾಲಿಗೆ ಬಂದರು. ಅಜ್ಜಿಯು ಅವಲಕ್ಕಿ ಮೊಸರು ಕಲೆಸಿಕೊಂಡು ತಿನ್ನುತ್ತಿದ್ದರೆ, ಮೊಮ್ಮಕ್ಕಳು ಅವಲಕ್ಕಿ ಚೂಡಾ ತಿನ್ನುತ್ತ ‘ಅವಲಕ್ಕಿ ಪವಲಕ್ಕಿ...’ ಆಡುತ್ತಿದ್ದರು. ಹೆಂಡತಿಯು ಅಡುಗೆಯಾಕೆಗೆ ಗುಜ್ಜು ಶೈಲಿಯ ‘ಬಟಾಟಾ ಅವಲಕ್ಕಿ’ ಮಾಡಲು ಸೂಚಿಸುತ್ತಿದ್ದಳು. ತನ್ನದೇ ಮನೆಯಲ್ಲಿ ‘ಬಾಂಗ್ಲಾ ಆಹಾರ ಅವಲಕ್ಕಿ’ಯ ಹತ್ತೆಂಟು ಅವತಾರ ಕಂಡ ‘ಶಾ’ಣ್ಯಾರು ‘ರಾಷ್ಟ್ರವ್ಯಾಪಿ ಅವಲಕ್ಕಿ ನಿಷೇಧ’ ಹೇರಲು ಮುಂದಾದರು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.