ADVERTISEMENT

ಚುರುಮುರಿ: ‘ವಿಶ್ವ’ಕೋಶ!

ಲಿಂಗರಾಜು ಡಿ.ಎಸ್
Published 16 ಮೇ 2022, 19:45 IST
Last Updated 16 ಮೇ 2022, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಸಾ ನಮಸ್ಕಾರ. ಎಲ್ಲ ಸಾಹಿತ್ಯ ಪ್ರಕಾರವೂ ಅದೆ, ಆದರೆ ರಾಜಕೀಯ ಸಾಹಿತ್ಯವೇ ಇಲ್ಲ ಅಂದಿದೀರಲ್ಲಾ ಯಾಕೆ?’ ತುರೇಮಣೆ ಸಂದರ್ಶನ ಶುರು ಮಾಡಿದರು.

‘ನೋಡ್ರೀ, ಪಕ್ಷದೊಳಗಿನ ಅಕ್ರಮ, ಭ್ರಷ್ಟಾಚಾರ ತೊಳೆಯಕ್ಕೋದಾಗ ಕಸ, ದುರ್ವಾಸನೆ ಬಂದೇ ಬತ್ತದೆ! ಇದುನ್ನೆಲ್ಲಾ ಜನಕ್ಕೆ ತಿಳಿಸೋ ರಾಜಕೀಯ ಸಾಹಿತ್ಯದ ‘ವಿಶ್ವಕೋಶ’ ನಿಘಂಟು ಮಾಡ್ತಿದೀನಿ!’ ಅಂದ್ರು.

‘ಸಾ ನಿಮ್ಮ ಪುಸ್ತಕದಿಂದ ಒಂದೆರಡು ನುಡಿಮುತ್ತು ಹೇಳಿಸಾ. ನಿಮ್ಮ ಪ್ರಕಾರ ಸಂಪುಟ ವಿಸ್ತರಣೆ ಅಂದ್ರೇನು?’

ADVERTISEMENT

‘ಕಾಯೋ ಆಟಕ್ಕೆ ಸಮ್ ಪುಟಗಳ ಸೇರಿಕೆ ಅಷ್ಟೇ! ಆಕಾಂಕ್ಷಿಗಳ ಮೂಗಿಗೆ ತುಪ್ಪ ಹಚ್ಚೋದು ಅಂತ್ಲೂ ಅನ್ನಬೌದು!’

‘ಸಾ ಪಕ್ಷಾಂತರ ಅಂದ್ರೇನು?’

‘ಪಕ್ಷಿಗಳು ಮುನಿಸಿಗ್ಯಂಡು ಪಕ್ಷದಿಂದ ಅಂತರ ಕಾಯ್ದುಕೊಳ್ಳೋದೇ ಪಕ್ಷಾಂತರ’.

‘ಶಾಸನಸಭೆ ಅಂದ್ರೇನು ಅರ್ಥ ಸಾ?’

‘ಶಾಸನವನ್ನು ಕುಲಗೆಡಿಸಿ ಬೆತ್ತಲೆ ಮಾಡೋಕ್ಕೆ ಅಂತಲೇ ಆಯ್ಕೆಯಾಗಿರೋ ನಾಯಕರ ಗುಂಪು ಅಂತ ಕನ್ರಿ’.

‘ದುರದೃಷ್ಟ ಅಂದ್ರೇನು ಸಾ?’

‘ನೋಡ್ರಿ, ಯಾರೂ ಯಾವಾಗ್ಲೂ ತಪ್ಪಿಸಿಕೊಳ್ಳೋಕೆ ಆಗದೇ ಇರುವಂಥಾ ಅದೃಷ್ಟ ಅಂದ್ರೆ ದುರದೃಷ್ಟ. ಇದಕ್ಕೆ ಉದಾಹರಣೆ ನಾನು!’

‘ಪಕ್ಷ ವಿರೋಧಿ ಧೋರಣೆ ಅಂದ್ರೇನು ಸಾ?’

‘ಬಣ್ಣದ ಮಾತು ಬಿಟ್ಟು ಸತ್ಯ ಹೇಳಿದೋರಿಗೆ ಸಿಕ್ಕೋ ಮರ್ಯಾದೆ’.

‘ಪಾರದರ್ಶಕ ತನಿಖೆ ಅರ್ಥ ಏನು ಸಾ?’

‘ಅದು ಪ್ಯಾರ್ ದರ್ಶಕ ತನಿಖೆ ಕಣ್ರೀ! ಬೇಕಾದೋರನ್ನ ಉಳಿಸಕ್ಕೆ ನಡೆಯೋ ಜಗನ್ನಾಟಕ ಅಷ್ಟೇ’.

‘ಕೋಮುವಾರು ಪದಕ್ಕೇನರ್ಥ?’

‘ನೋಡ್ರೀ, ನಮ್ಮ ದೇಶ ನಾಶ ಮಾಡಕ್ಕೆ ಶತ್ರುದೇಶದವರ ಸಹಾಯ ಪಡೆಯೋ ವಿಧಾನವೇ ಕೋಮುವಾರ್’.

‘ಕೊನೇದಾಗಿ, ಸಮ್ಮಿಶ್ರ ಸರ್ಕಾರ ಅಂದ್ರೇನು?’

‘ವಿರೋಧಿಗಳೆಲ್ಲಾ ಸೇರಿ ನಡೆಸೋ ಕಿಚಡಿ ಸರ್ಕಾರ ಅಂತ’.

‘ನಿಮ್ಮ ರಾಜಕೀಯ ಸಾಹಿತ್ಯಕ್ಕೆ ಒಳ್ಳೇದಾಗ್ಲಿ ಸಾ, ನಮಸ್ಕಾರ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.