ADVERTISEMENT

ಚುರುಮುರಿ: ಸೇತುವೆ ಕಳ್ಳರು

ಆನಂದ ಉಳಯ
Published 10 ಏಪ್ರಿಲ್ 2022, 17:16 IST
Last Updated 10 ಏಪ್ರಿಲ್ 2022, 17:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಚತಂತ್ರದ ಒಂದು ಕತೆ ಹೇಳ್ತೀನಿ ಕೇಳಿ ಎಂದಳು ಹೆಂಡತಿ. ಪಂಚತಂತ್ರ ಅಲ್ವಾ? ಎಂದೆ. ಅಲ್ಲಾರಿ, ಲಂಚತಂತ್ರಾನೆ ಎಂದು ಶುರು ಮಾಡಿದಳು.

ವಿದೇಶದಿಂದ ದೆಹಲಿಗೆ ಬಂದಿದ್ದ ಮಿನಿಸ್ಟರ್, ನಮ್ಮ ಮಂತ್ರಿಗಳ ಮನೆಗೆ ಔತಣಕೂಟಕ್ಕೆ ಹೋಗಿದ್ದರು. ಮಂತ್ರಿಗಳ ಮನೆ ನೋಡಿ ಮಿನಿಸ್ಟರ್ ಬೆರಗಾದರು. ಕಣ್ಣು ಕೋರೈಸುವಂತಿತ್ತು. ‘ಇದನ್ನು ಹೇಗೆ ಕಟ್ಟಿಸಲು ಸಾಧ್ಯವಾಯಿತು?’ ಎಂದು ಮಿನಿ ಸ್ಟರ್ ತಡೆಯಲಾಗದೆ ಕೇಳೇಬಿಟ್ಟರು. ಅದಕ್ಕೆ ಮಂತ್ರಿಗಳು ಏನೂ ಉತ್ತರಿಸದೆ ಅವರನ್ನು ಬೆಡ್‍ರೂಂಗೆ ಕರೆದೊಯ್ದು ಕಿಟಕಿ ಬಳಿ ನಿಲ್ಲಿಸಿ, ‘ಅಲ್ಲೊಂದು 35 ಅಂತಸ್ತಿನ ಕಟ್ಟಡ ಕಾಣುತ್ತದೆಯೇ?’ ಎಂದರು. ‘ಹೌದು’ ಎಂದರು ಮಿನಿಸ್ಟರ್. ‘20 ಪರ್ಸೆಂಟ್’ ಎಂದರು ಮಂತ್ರಿ. ಅವರನ್ನು ಇನ್ನೊಂದು ಬೆಡ್‌ರೂಂಗೆ ಕರೆದೊಯ್ದು ಕಿಟಕಿಯಿಂದ ಭವ್ಯ ಮಾಲ್ ತೋರಿಸಿ ‘ಅದರಿಂದ 15 ಪರ್ಸೆಂಟ್’ ಎಂದರು. ಮತ್ತೊಂದು ಬೆಡ್‌ರೂಂಗೆ ಕರೆದೊಯ್ದು ದೂರದಲ್ಲಿದ್ದ ಕಾರ್ಖಾನೆಯ ಕಟ್ಟಡ ತೋರಿಸಿ ‘20 ಪರ್ಸೆಂಟ್’ ಎಂದರು.

ಮಿನಿಸ್ಟರ್‌ಗೆ ಅರ್ಥವಾಯಿತೇ? ನಾನು ಕೇಳಿದೆ.

ADVERTISEMENT

ಅರ್ಥವಾದಂತೆ ತಲೆ ಆಡಿಸಿ ಔತಣ ಮುಗಿಸಿ ಹೋದರು. ಕೆಲವು ವರ್ಷಗಳ ನಂತರ ನಮ್ಮ ಮಂತ್ರಿಗಳು ಅವರ ದೇಶಕ್ಕೆ ಹೋದಾಗ, ಇದೇ ಮಿನಿಸ್ಟರ್ ತಮ್ಮ ಮನೆಯಲ್ಲಿ ಔತಣಕೂಟ ಏರ್ಪಡಿಸಿದ್ದರು. ಮನೆ ನೋಡಿ ಮಂತ್ರಿಗಳು ಹುಬ್ಬೇರಿಸಿದಾಗ ಮಿನಿಸ್ಟರ್ ಸದ್ದಿಲ್ಲದೆ ಅವರನ್ನು ಬೆಡ್‍ರೂಂಗೆ ಕರೆದೊಯ್ದು ‘ಅಲ್ಲೊಂದು ದೊಡ್ಡ ಸೇತುವೆ ಕಾಣಿಸುತ್ತಿದೆಯೇ ನಿಮಗೆ?’ ಎಂದು ಕೇಳಿದರು. ‘ಇಲ್ಲವಲ್ಲ!’ ಎಂದರು ಮಂತ್ರಿಗಳು. ‘100 ಪರ್ಸೆಂಟ್’ ಎಂದರು ಮಿನಿಸ್ಟರ್. ಅಷ್ಟೇ ಕತೆ ಎಂದಳು ಹೆಂಡತಿ.

ಅದು ಈಗ್ಯಾಕೆ? ಎಂದೆ ಅರ್ಥವಾಗದೆ.

ಬಿಹಾರದಲ್ಲಿ ಕಳ್ಳರು ಉಕ್ಕಿನ ಸೇತುವೆಯನ್ನೇ ಬಿಚ್ಚಿಕೊಂಡು ಹೋದ ಸುದ್ದಿ ಪೇಪರ್‌ನಲ್ಲಿ ಓದಿದಾಗ ಆ ಕತೆ ನೆನಪಿಗೆ ಬಂತು ಎಂದಳು.

ಆ ಗ್ಯಾಂಗ್ ಲೀಡರ್ ಶಾಸಕ ಆಗ್ತಾನೆ ಎಂದೆ.

ಇನ್ನೂ ಆಗಿಲ್ಲ ಅಂತೀರಾ?

ಇಂದಿನ ಶಾಸಕನೇ ನಾಳಿನ ಮಂತ್ರಿ ಎಂದು ಮಾತು ಮುಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.