ADVERTISEMENT

ಚುರುಮುರಿ: ಚೇರು ಬಂಡವಾಳ

ಲಿಂಗರಾಜು ಡಿ.ಎಸ್
Published 23 ಜೂನ್ 2025, 23:26 IST
Last Updated 23 ಜೂನ್ 2025, 23:26 IST
   

‘ಸಾ ಆರ್‌ಸಿಬಿ ಅವಘಡ, ಬಿಆರ್‌ಪಿ ಸತ್ಯವಾಕ್ಕಿನ ಹಂಗಾಮ ಆದಮ್ಯಾಲೆ ಸಿಎಂ- ಡಿಸಿಎಂಗೆ ಸನಿಕಾಟ ಸುರುವಾದಂಗದಲ್ಲಾ?’ ತುರೇಮಣೆಗೆ ಕೇಳಿದೆ.

‘ಹಂಗೇನಿಲ್ಲ ಕಲಾ... ಪತಿವ್ರತೆಯರಿಗೆ ಕಷ್ಟಗಳು ಬಂದೇ ಬತ್ತವೆ. ಈಗ ಬಿಜೆಪಿಯೋರು ಶಸ್ತ್ರ ತ್ಯಾಗ ಮಾಡಿ ಕುಂತಿರದು ಕೆಲವರಿಗೆ ಅನುಕೂಲಾಗ್ಯದೆ. ದೇವರು ಪರೀಕ್ಸೆ ಕೊಡ್ತನೆ. ಸಮಾಜಾನ, ತಾಳ್ಮೆಯಿಂದ ಗೆದ್ದು ಬರಬಕು’ ತುರೇಮಣೆ ಉತ್ತರಿಸಿದರು.

‘ಎಲ್ಲಿ ಸಮಾಜಾನ ಸಾ. ಇವರಿಬ್ಬರೂ ಏಟೊತ್ತಿಗೆ ಇಳಿದು ಮನೆಗೆ ಹೋದಾರೋ. ನಾವೇಟು ಹೊತ್ತಿಗೆ ಚೇರಿಗೆ ಅಮರಿಕ್ಯಂದೇವೋ ಅಂತ ಲಾಟುಗಟ್ಟಲೇ ಜನ ಬಾಯಿಗೆ ಲಕ್ಕಿಕಾಳು ಹಾಕ್ಕ್ಯಂದು ಕೂತವ್ರೆ’ ಅಂತಂದೆ.

ADVERTISEMENT

‘ಅದೀಯೆ. ಮನ್ನೆ ಹುಟ್ದಬ್ಬ ಮಾಡಿಕ್ಯಂದು ಕಾಲೇಜು ಹುಡ್ಲಾದಂಗೆ ಕಾಣ್ತಾವ್ರೆ ಅಣ್ಣಾರು. ಸಾವ್ಕರ‍್ರು ಹೊಸಬಟ್ಟೆ ಇಕ್ಕ್ಯಂದು ರೆಡಿಯಾತಾವ್ರಂತೆ. ಇಕ್ಕಡೆ ಪರಮಣ್ಣಗೆ, ಮುನಿಯಣ್ಣಂಗೆ, ಎಂ.ಬಿ. ಪಾಟಿಲಣ್ಣಗೆ ಕುರ್ಚಿ ಜ್ವರ ಬಂದು ಹೋಯ್ತಾ ಅದಂತೆ. ಮುಂದೆಂಗೆ? ಶಾಣಕ್ಯರು ಬ್ಯಾರೆ ಬಂದೋಗ್ಯವರೆ’ ಯಂಟಪ್ಪಣ್ಣ ಕುಟುಕಿತು.

‘ನೋಡಿರ್ಲಾ ಸಿಎಂ, ಮಂತ್ರಿ, ನಿಗಮ- ಮಂಡಳಿ ಸ್ಥಾನಕ್ಕೆ ಕುರಿ ಯಾಪಾರದ ಥರ ಅದರದ್ದೇ ಆದ ರೇಟಿರತದೆ. ಯಾವೋನು ಏಟು ಬೆಳ್ಳು ಹಿಡೀತನೋ ಅವನಿಗೇ ಸೀಟು’ ತುರೇಮಣೆ ಸುದ್ದಿ ಸಿಡಿಸಿದರು.

‘ಹಸುಮಗೀಗೆ ಹೇಳ್ದಂಗೆ ಹೇಳ್ತಿದ್ದೀರಲ್ಲ ಸಾ. ದೇಸಾದ ದೇಸಕೆ ಗೊತ್ತದೆ ಇದು. ಕಮಲದೋರೆ ಅಂದಿರಲಿಲ್ಲವಾ ಸಿಎಂ ಚೇರಿಗೆ ಏಡೂವರೆ ಸಾವಿರ ಕೋಟಿ ರೇಟದೆ ಅಂತವಾ’ ನಾನು ಹೇಳಿದೆ.

‘ಅದುನ್ನೇ ಕಲಾ ಚೇರು ಬಂಡವಾಳ ಅನ್ನದು. ಹೈಕಮಾಂಡಿನ ಇಎಂಐ, ಕೆವೈಸಿ ತಿಳುಕಂದಿರಬಕು. ಚೇರು ಬಂಡವಾಳದ ವ್ಯಾಕರಣ ತಿಳಿದೋರು ಬ್ಯಾರೇರಿಂದ ದುಡ್ಡಿಕ್ಸಿ ಚೇರು ತಕ್ಕತರೆ. ಆ ಮೇಲೆ ಅದೇ ದುಡಿಯುವ ಬಂಡವಾಳಾತದೆ’ ತುರೇಮಣೆ ಚೇರು ಭಾರತದ ದುಷ್ಟರೂಪ ದರ್ಶನ ಮಾಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.