ADVERTISEMENT

ಚುರುಮುರಿ: ಏನು ಹಂಗಂದ್ರೆ?

ಬಿ.ಎನ್.ಮಲ್ಲೇಶ್
Published 20 ಅಕ್ಟೋಬರ್ 2022, 22:45 IST
Last Updated 20 ಅಕ್ಟೋಬರ್ 2022, 22:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹರಟೆಕಟ್ಟೆಯಲ್ಲಿ ತೆಪರೇಸಿ ನರ್ಗೀಸ್ ಮಂಡಕ್ಕಿ, ಮೆಣ್ಸಿನ್ಕಾಯಿ ತಿನ್ನುತ್ತ ‘ಮೊನ್ನಿ ಏನಾತು ಗೊತ್ತಾ?’ ಎಂದ.

‘ಏನಾತು?’ ಗುಡ್ಡೆ ಪ್ರಶ್ನೆ.

‘ನನ್ ಸಣ್ ಮಗ ಕ್ರಿಕೆಟ್‌ನಲ್ಲಿ ಸೋತು ಮನೆಗೆ ಬಂದಿದ್ದ. ಯಾಕೋ ಸೋತ್ರಿ ಅಂತ ಕೇಳಿದ್ಕೆ ‘ನಾವೇನ್ ಸೋತಿಲ್ಲ, ಅವರೇ ಗೆದ್ರು’ ಅನ್ನೋದಾ?’

ADVERTISEMENT

‘ಅಲೆ ಇವ್ನ, ಹಂಗಂದ್ನಾ? ಈ ತರ ಎಲ್ಲೋ ಕೇಳಿದಂಗೈತಪ...’ ದುಬ್ಬೀರ ತಲೆ ಕೆರೆದುಕೊಂಡ.

‘ಅದು ಹೋಗ್ಲಿ, ಸ್ಕೂಲ್ ಪರೀಕ್ಷೇಲೂ ಫೇಲಾಗೋದಾ? ಯಾಕೋ ಅಂದ್ರೆ ‘ನಾನೇನ್ ಫೇಲಾಗಿಲ್ಲ, ಮೇಷ್ಟ್ರು ಮಾರ್ಕ್ಸ್ ಕೊಟ್ಟಿಲ್ಲ ಅಷ್ಟೆ’ ಅಂತಾನೆ! ಏನು ಹಂಗಂದ್ರೆ?’

‘ಅಂದ್ರೇ ನಾನೇನ್ ಫೇಲಾಗಿಲ್ಲ, ಬೇರೆಯವರು ಪಾಸಾಗಿದಾರೆ ಅಂತ ಅರ್ಥ. ನಿನ್ ಮಗ ಮುಂದೆ ದೊಡ್ಡ ರಾಜಕಾರಣಿ ಆಗ್ತಾನೆ ಕಣಲೆ ತೆಪರ...’ ಗುಡ್ಡೆ ನಕ್ಕ.

‘ಇದ್ನ ಇನ್ನೊಂದ್ ತರ ಹೇಳಬಹುದಾ?’ ಕೊಟ್ರೇಶಿ ಕೇಳಿದ.

‘ಹೆಂಗೆ?’

‘ಹಸಿವಿನ ಸೂಚ್ಯಂಕದಲ್ಲಿ ಭಾರತ ಕಳಪೆ ಆಗೇತಲ್ಲ, ಅದನ್ನ ‘ನಾವ್ಯಾರೂ ಹಸ್ಕಂಡಿಲ್ಲ, ಬೇರೆ ದೇಶದೋರು ಚೆನ್ನಾಗಿ ಊಟ ಮಾಡ್ತದಾರೆ’ ಅನ್ನಬೋದಾ?’

ದುಬ್ಬೀರನಿಗೆ ಮತ್ತೆ ಗೊಂದಲ. ಈ ತರದ್ದು ಎಲ್ಲೋ ಕೇಳಿದೀನಲ್ಲ ಅಂತ ಮತ್ತೂ ತಲೆ ಕೆರೆದುಕೊಂಡ.

ಅಷ್ಟರಲ್ಲಿ ಗುಡ್ಡೆ ಮಂಡಕ್ಕಿ ತಿಂದು ಪೇಪರ್‌ನಲ್ಲಿ ಕೈ ಒರೆಸಿಕೊಳ್ಳುವಾಗ ಅದರಲ್ಲಿದ್ದ ಒಂದು ಹೆಡ್‌ಲೈನ್‌ನ ಗಟ್ಟಿಯಾಗಿ ಓದಿದ ‘ರೂಪಾಯಿ ಕುಸೀತಿಲ್ಲ, ಡಾಲರ್ ಬಲವರ್ಧನೆ ಆಗ್ತಾ ಇದೆ...’

‘ಹ್ಞಾಂ... ಇದೇ ನನ್ ತೆಲಿ ತಿಂತಿದ್ದು. ಅದ್ನ ಯಾರು ಹೇಳಿದಾರ್ಲೆ ಗುಡ್ಡೆ?’ ದುಬ್ಬೀರ ಕುತೂಹಲದಿಂದ ಕೇಳಿದ.

‘ಇದ್ನಾ? ಏನೋಪ್ಪ, ಇದ್ರಲ್ಲಿ ಅಷ್ಟೇ ಇರೋದು. ಪೇಪರ್ ಹರಿದೋಗಿದೆ’ ಎಂದ ಗುಡ್ಡೆ.

‘ಥೋತ್ತೇರಿ...’ ತಲೆ ಕೊಡವಿದ ದುಬ್ಬೀರ. ಎಲ್ಲರೂ ಮುಖ ಮುಖ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.