ADVERTISEMENT

ಚುರುಮುರಿ: ಮೌನ ಸಂದರ್ಶನ

ಬಿ.ಎನ್.ಮಲ್ಲೇಶ್
Published 14 ಏಪ್ರಿಲ್ 2022, 18:29 IST
Last Updated 14 ಏಪ್ರಿಲ್ 2022, 18:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪತ್ರಕರ್ತ ತೆಪರೇಸಿಗೆ ಕಚೇರಿಯಿಂದ ತುರ್ತು ಬುಲಾವ್ ಬಂತು. ‘ನೋಡ್ರಿ, ಆ ಗುತ್ತಿಗೆದಾರನ ಆತ್ಮಹತ್ಯೆ ಬಗ್ಗೆ ಮುಖ್ಯಮಂತ್ರಿ ರಿಯಾಕ್ಷನ್ ಬೇಕು, ಫಟ್ ಅಂತ ಹೋಗಿ ತಗಂಬನ್ನಿ...’ ಸಂಪಾದಕರು ಆದೇಶಿಸಿದರು.

ತೆಪರೇಸಿ ತಲೆ ಕೆರೆದುಕೊಂಡು ನಿಂತುಕೊಂಡ. ‘ಸರ್, ಅವರು ಜಾಸ್ತಿ ಮಾತೇ ಆಡಲ್ಲ, ಏನ್ ಪ್ರಶ್ನೆ ಕೇಳಿದ್ರೂ ಸುಮ್ನೆ ಇರ್ತಾರೆ. ಮೌನಿ ಅಂತ ವಿರೋಧ ಪಕ್ಷದೋರು ಟೀಕೆ ಮಾಡ್ತಿರೋದು ನಿಮಗೂ ಗೊತ್ತಲ್ಲ. ಆದ್ರೂ ಟ್ರೈ ಮಾಡ್ತೀನಿ’ ಎಂದ.

ಮುಖ್ಯಮಂತ್ರಿ ಮನೆ ಬಳಿ ಆಗ್ಲೇ ಹತ್ತಾರು ಪತ್ರಕರ್ತರು ಅವರ ಸಂದರ್ಶನಕ್ಕೆ ಮುಗಿಬಿದ್ದಿದ್ದರು. ‘ಸರ್, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರು ಈಗಾಗ್ಲೆ ರಾಜೀನಾಮೆ ಘೋಷಿಸಿದ್ದಾರೆ... ಅವರು ಈ ಆರೋಪದಿಂದ ಮುಕ್ತರಾಗ್ತಾರಾ ಸರ್?’

ADVERTISEMENT

ಮುಖ್ಯಮಂತ್ರಿ ಆಕಾಶ ನೋಡಿದರು. ಅಲ್ಲಿ ಅವರಿಗೆ ಏನು ಕಾಣಿಸಿತೋ... ತೆಪರೇಸಿಗಂತೂ ಏನೂ ಕಾಣಲಿಲ್ಲ.

‘ಸರ್, ನಲವತ್ತು ಪರ್ಸೆಂಟ್ ಕಮಿಷನ್ನೇ ಇದಕ್ಕೆ ಕಾರಣ ಅಂತ ವಿರೋಧ ಪಕ್ಷದೋರು ಹೇಳ್ತಿದಾರಲ್ಲ’.

ಮುಖ್ಯಮಂತ್ರಿ ಕೈ ಮುಗಿದು ತಲೆ ಅಲ್ಲಾಡಿಸಿದರು. ಕೈ ಮುಗಿದಿದ್ಯಾಕೆ, ತಲೆ
ಅಲ್ಲಾಡಿಸಿದ್ಯಾಕೆ... ತೆಪರೇಸಿಗೆ ಅರ್ಥವಾಗಲಿಲ್ಲ.

‘ಸರ್, ರಾಜ್ಯದಲ್ಲಿ ಸರ್ಕಾರವೇ ಇಲ್ಲ ಅಂತಿದಾರೆ?’

ಮುಖ್ಯಮಂತ್ರಿ ಕಣ್ಣು ಕಿರಿದುಗೊಳಿಸಿ ಪ್ರಶ್ನೆ ಕೇಳಿದವನನ್ನು ನೋಡಿದರು. ಅವರಿಗೆ ಸಿಟ್ಟು ಬಂದಿದೆ ಎಂದು ತೆಪರೇಸಿಗೆ ಗೊತ್ತಾಯಿತು.

‘ಸರ್, ಸಂಪುಟ ವಿಸ್ತರಣೆ ಯಾವಾಗ?’

ಮುಖ್ಯಮಂತ್ರಿ ಮುಗುಳ್ನಕ್ಕರು. ಏನಿದರ ಅರ್ಥ? ಆಗುತ್ತೆ ಅಂತಾನೋ ಆದಂಗೆ ಅಂತಾನೋ? ತೆಪರೇಸಿ ತಲೆ ಕೆರೆದುಕೊಂಡ.

‘ಸರ್, ವಿರೋಧ ಪಕ್ಷದೋರು ಸರ್ಕಾರದ ವಿರುದ್ಧ ಭಾರಿ ಹೋರಾಟ ಮಾಡ್ತಾರಂತೆ’.

ಮುಖ್ಯಮಂತ್ರಿ ಹುಬ್ಬುಗಂಟಿಕ್ಕಿ ಹೊರಡ
ಲೆತ್ನಿಸಿದರು. ಆಗ ತೆಪರೇಸಿ ‘ಸರ್, ಕೊನೇ ಪ್ರಶ್ನೆ, ನಿಮ್ಮ ಮಂಡಿ ನೋವು ಹೇಗಿದೆ?’ ಎಂದ.

ಮುಖ್ಯಮಂತ್ರಿ ನಿಂತರು, ಮಾತಾಡಿದರು ‘ಹೈಕಮಾಂಡ್ ನಾಯಕತ್ವ ಬದಲಾವಣೆ ಇಲ್ಲ ಎಂದಿದೆ’ ಎಂದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.