ADVERTISEMENT

ಚುರುಮುರಿ: ಹರಕೆಯ ಕುರಿಗಳು

ಸುಮಂಗಲಾ
Published 10 ಜೂನ್ 2025, 0:02 IST
Last Updated 10 ಜೂನ್ 2025, 0:02 IST
.
.   

‘ಈ ಸಲ ಕಪ್‌ ನಮ್ದೇ ಅಂತ ಕುಣೀತಿದ್ದಿರಿ… ಕಪ್‌ ಜೊತಿಗಿ ಕಪ್ಪುಚುಕ್ಕೆನೂ ಸಿಕ್ತು ಬಿಡು’ ಎಂದು ಬೆಕ್ಕಣ್ಣ ಹಂಗಿಸಿತು.

‘ಅದೇ ಮತ್ತೆ… ಈಗ ಒಬ್ಬರ ಮ್ಯಾಲೆ ಇನ್ನೊಬ್ಬರು ತಪ್ಪು ಹೊರೆಸತಾರೆ. ಯಾರನ್ನು ಅಮಾನತು ಮಾಡಿದ್ರೇನು, ಯಾರು ರಾಜೀನಾಮೆ ಕೊಟ್ಟರೇನು… ಹೋದ ಪ್ರಾಣ ಮಾತ್ರ ಬರಂಗಿಲ್ಲ’ ಎಂದೆ.

‘ಯಾರದೋ ಅಹಂಕಾರದ ತಪ್ಪು ನಿರ್ಧಾರಕ್ಕೆ ಇನ್ನಾರೋ ಹರಕೆಯ ಕುರಿ ಆಗತಾರೆ. ಕಪ್‌ ನಮ್ದೇ ಅಂತ ಕುಣಿಯೋದ್ರ ಜೊತಿಗಿ ಪ್ರಾಣನೂ ನಮ್ದೇ‌, ಜವಾಬ್ದಾರಿನೂ ನಮ್ದೇ ಅಂತ ಅಭಿಮಾನಿಗಳು ಯೋಚನೆ ಮಾಡಬೇಕಿತ್ತು’ ಎಂದು ಬೆಕ್ಕಣ್ಣ ಲೊಚಗುಟ್ಟಿತು.

ADVERTISEMENT

‘ಅದ್ಸರಿ… ಆ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯವರು ಒಂದೇ ದಿನದ ಸಂಭ್ರಮಾಚರಣೆಗೆ ಸುಮಾರು ₹15 ಕೋಟಿ ಖರ್ಚು ಮಾಡ್ಯಾರಂತೆ. ಅಷ್ಟಕೊಂದು ರೊಕ್ಕ ಎದಕ್ಕೆ ಖರ್ಚು ಮಾಡಿರತಾರೆ?’ ಎಂದೆ ನಾನು ಕೋಪದಿಂದ.

‘ಕ್ರೀಡಾಂಗಣದ ಹೊರಗೆ ಕಾಲ್ತುಳಿತ, ಒಳಗೆ ಸಂಭ್ರಮಾಚರಣೆ! ಅವ್ರಿಗಿ ರೊಕ್ಕ, ಮಂದಿ ಪ್ರಾಣ ಎರಡೂ ಲೆಕ್ಕಕ್ಕಿಲ್ಲ. ಆರ್‌ಸಿಬಿ ಮಾಜಿ ಮಾಲೀಕ ಮಲ್ಯ ಆವಾಗ ನಾ ₹476 ಕೋಟಿ ಬಿಡ್‌ ಮಾಡಿ ಆರ್‌ಸಿಬಿ ಟೀಮ್‌ ಕಟ್ಟಿದ್ದೆ… ನಮ್‌ ಹುಡುಗ್ರು ಕಪ್‌ ಬೆಂಗ್ಳೂರಿಗೆ ತಂದಿದನ್ನು ಕಣ್ಣು ತುಂಬಿಕೊಳ್ಳೋ ಭಾಗ್ಯನೂ ನನಗಿಲ್ಲ ಅಂತ ಲಂಡನ್‌ವಳಗೆ ಕುಂತು ಕಣ್ಣೀರು ಮಿಡಿದಾನೆ’ ಎಂದಿತು ಬೆಕ್ಕಣ್ಣ.

‘ಇದೇ ನೆವದಾಗೆ ನಾಕು ತಾಸಿನ ಪಾಡ್‌ಕಾಸ್ಟ್‌ ರಿಲೀಸ್‌ ಮಾಡ್ಯಾನೆ. ನಾ ಕಳ್ಳನೂ ಅಲ್ಲ, ಸುಳ್ಳನೂ ಅಲ್ಲ, ವಂಚಕನಂತೂ ಅಲ್ಲವೇ ಅಲ್ಲ. ನಾ ಎಲ್ಲಿಗೂ ಓಡಿಯೂ ಹೋಗಿಲ್ಲ. ಕೆಲಸದ ಮ್ಯಾಲೆ ಲಂಡನ್ನಿಗೆ ಬಂದಂವ ಇಲ್ಲೇ ಉಳದೀನಿ ಅಂತ ವಾದ ಮಾಡ್ಯಾನೆ’.

‘ಹೂಂ ಮತ್ತೆ… ಈ ಕಲಿಯುಗದಾಗೆ ಕಳ್ಳ, ಸುಳ್ಳ, ವಂಚಕ, ಮಾನವೀಯತೆ, ಅಭಿಮಾನದಂತಹ ಪದಗಳ ಅರ್ಥವೇ ಬದಲಾಗೈತಿ. ಹೊಸ ಶಬ್ದಕೋಶ ರಚಿಸಬೇಕು’ ಎಂದು ಬೆಕ್ಕಣ್ಣ ತಲೆ ಮೇಲೆ ಕೈ ಹೊತ್ತಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.