ADVERTISEMENT

ಚುರುಮುರಿ: ಸಿಂಹ ಗರ್ಜನೆ!

ಗುರು ಪಿ.ಎಸ್‌
Published 15 ಜುಲೈ 2022, 1:37 IST
Last Updated 15 ಜುಲೈ 2022, 1:37 IST
   

‘ವ್ಹಾವ್‌... ಸೂಪರ್ಬ್...’ ನಿರ್ಮಾಣ ಹಂತದ ಲ್ಲಿರುವ ಸಂಸತ್‌ ಭವನದ ಕಟ್ಟಡದ ಮೇಲೆ ಅನಾವರಣಗೊಂಡಿರುವ ರಾಷ್ಟ್ರಲಾಂಛನ ದಲ್ಲಿನ ಹೊಸ ಸಿಂಹವನ್ನ ನೋಡ್ತಿದ್ದಂತೆ ರೋಮಾಂಚನವಾಯಿತು. ಅಲ್ಲಿ ಗರ್ಜಿಸುತ್ತಿರುವ ಸಿಂಹದಂತೆಯೇ, ಪ್ರೌಡ್ ಫೀಲಿಂಗ್‌ನಲ್ಲಿ ನಾನೂ ಎದೆಯುಬ್ಬಿಸಿ ಕುಳಿತೆ. ‘ನೋಡೇ ಆ ಸಿಂಹಾನ, ಹೇಗ್ ಗರ್ಜಿಸ್ತಿದೆ ಅಂತಾ... ನೋಡ್ತಿರು, ನಮ್ ದೇಶ ಇನ್ನು ಎಲ್ಲೋ ಹೋಗಿ ನಿಲ್ಲುತ್ತೆ’.

‘ದೇಶ ಎಲ್ಲಾದರೂ ನಿಂತ್ಕೊಳ್ಲಿ, ಮೊದ್ಲು ನೀವ್ ಎದ್ ನಿಂತ್ಕೊಳ್ರಿ...’ ಗದರಿದಳು ಹೆಂಡ್ತಿ.

‘ನೀನೊಂಥರಾ ನಿರಾಶಾವಾದಿ. ಯಾವುದನ್ನೂ ಸಂಭ್ರಮಿಸಲ್ಲ’ ಗೊಣಗಿದೆ.

ADVERTISEMENT

‘ಎರಡು ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ. ಮೊದಲು ಕಟ್ಟಿ ಮರ್ಯಾದೆ ಉಳಿಸ್ಕೊಳ್ರಿ’.

‘ದೇಶದ ಬಗ್ಗೆ ಮಾತಾಡೋವಾಗ, ಈ ಥರ ಸಿಲ್ಲಿ ಮ್ಯಾಟರ್ ಹೇಳಿ, ನನ್ನ ಮೂಡ್ ಆಫ್ ಮಾಡ್ತಿಯಾ ನೋಡು, ವಿರೋಧ ಪಕ್ಷದವರಂಗೆ ಮೊಸರಲ್ಲಿ ಕಲ್ಲು ಹುಡುಕೋದು ಜಾಸ್ತಿ ನೀನು’.

‘ಮೊಸರು ಅಂದ ತಕ್ಷಣ ನೆನಪಾಯ್ತು. ಅದಕ್ಕೂ ಜಿಎಸ್‌ಟಿ ಹಾಕ್ತಿರೋದ್ರಿಂದ ರೇಟ್ ಜಾಸ್ತಿ ಆಗಿದೆ. ಹಾಲು, ಮೊಸರಿನವಳಿಗೆ ಸಾವಿರ ರೂಪಾಯಿ ಕೊಡಬೇಕು’ ಎಂದಳು.

‘ಇದೆಲ್ಲ ಇದ್ದದ್ದೇ. ನಮ್ಮ ನವಭಾರತವೂ ಇನ್ಮೇಲೆ ಹಾಗೇ ಗರ್ಜಿಸಬಹುದು. ಸಂಭ್ರಮಿಸು...’

‘ನಿಮ್ ಸಂಭ್ರಮಕ್ಕಿಷ್ಟು... ಊರಲ್ಲಿ ಜೋರು ಮಳೆ ಬಂದು ಬೆಳೆ ಕೊಚ್ಕೊಂಡು ಹೋಗಿದೆಯಂತೆ, ಸರ್ಕಾರದವರು ನೋಡಿದ್ರೆ ಯಾರೂ ಕೇರ್ ಮಾಡ್ತಿಲ್ಲ, ವಿರೋಧ ಪಕ್ಷದವ್ರು ನೋಡಿದ್ರೆ ಯಾವುದೋ ಉತ್ಸವ ಅಂತ ಓಡಾಡ್ತಾವ್ರಂತೆ, ನಿಮ್ಮಣ್ಣ ಫೋನ್ ಮಾಡಿದ್ದ’.

ಸಿಂಹ ಗರ್ಜನೆಯ ಫೀಲಿಂಗ್ ಕುಗ್ಗತೊಡಗಿತು. ‘ಬೆಳೆ ಹಾಳಾಗೋದೆಲ್ಲ ಮಾಮೂಲಿ... ದೇಶದ ಬಗ್ಗೆ ಮಾತಾಡು...’ ಅಳುಕುತ್ತಲೇ ಹೇಳಿದೆ.

‘ಅಪ್ಪ ಪುಣ್ಯಾತ್ಮ, ರಾಷ್ಟ್ರಲಾಂಛನದ ಬಗ್ಗೆ ನನಗೂ ಗೌರವ ಇದೆ. ದೇಶಭಕ್ತಿ ಪ್ರದರ್ಶನದ ವಸ್ತುವಲ್ಲ. ರಾಷ್ಟ್ರಗೀತೆಯನ್ನ ಜೋರಾಗಿ ಹಾಡೋಕಾದ್ರೂ ಹೊಟ್ಟೇಲಿ ಕೂಳಿರಬೇಕಲ್ಲ. ಸಿಲಿಂಡರ್ ತಂದವನಿಗೆ 30 ರೂಪಾಯಿ ಸೇರಿ, 1,090 ರೂಪಾಯಿ ಕೊಟ್ಟು, ಯಾರ್‍ಯಾರಿಗೆ ಜೈಅಂತಿಯೋ ಅನ್ಕೊಂಡು ಕೂತ್ಕೊ...’ ಸಿಲಿಂಡರ್ ಬಿಲ್ಲು ಮುಂದಿಟ್ಟಳು ಪತ್ನಿ. ಸಿಂಹದಂತೆ
ಗರ್ಜಿಸ್ತಿದ್ದವನು, ಕುನ್ನಿಯಂತಾಗಿಬಿಟ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.