ADVERTISEMENT

ಮಾಸ್ಕ್ ಮಾರಿ!

ಚಂದ್ರಕಾಂತ ವಡ್ಡು
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತ್ರಿಲೋಕ ಸಂಚಾರಿ ನಾರದಮುನಿಯ ಗತ್ತಿನಲ್ಲಿ ಲಾಕ್‌ಡೌನ್ ರೌಂಡ್ಸ್ ಹೊರಟ ತಿಂಗಳೇಶ. ಭೂಲೋಕ ಅಪಾರ್ಟ್‌ಮೆಂಟಿನ ಹದಿಮೂರನೇ ಮಹಡಿ ಇಳಿದು ಗೇಟ್ ಬಳಿ ಬಂದಾಗ, ಕಣ್ಣಿಗೆ ಬಿದ್ದದ್ದು ನೇಪಾಳಿ ಸೆಕ್ಯುರಿಟಿ ಗಾರ್ಡ್. ಆತ ಕಿವಿಗೆ ಸುತ್ತಿಕೊಳ್ಳಬೇಕಾದ ಮಾಸ್ಕಿನ ಲಾಡಿಯನ್ನು ತೋರುಬೆರಳಿಗೆ ಸಿಕ್ಕಿಸಿಕೊಂಡು, ಥೇಟ್ ಸುದರ್ಶನ ಚಕ್ರದಂತೆ ತಿರುಗಿಸುತ್ತಿದ್ದ. ನರಮಾನವನೊಬ್ಬ ಕೊರೊನಾ ವಿರುದ್ಧದ ಸುರಕ್ಷಾ ಕವಚವನ್ನೇ ವೈರಾಣು ಸಂಹಾರದ ಅಸ್ತ್ರದಂತೆ ಹಿಡಿದಿದ್ದು ವಿಚಿತ್ರವೆನಿಸಿದರೂ ಧೈರ್ಯ ಬರಿಸಿತು.

ರಸ್ತೆಯಾಚೆಗೆ ಸೈಕಲ್ಲಿನಲ್ಲಿ ಹೊರಟಿದ್ದ ಪೇಪರ್ ಹಾಕುವ ಎಳೆಯ ಬಾಲಕನ ನುಣುಪು ಗಲ್ಲದ ತುಂಬಾ ಕಪ್ಪು ಗಡ್ಡ ಕಂಡು ತಿಂಗಳೇಶನಿಗೆ ಅಚ್ಚರಿ. ಆ ಹುಡುಗ ಕಪ್ಪು ಮಾಸ್ಕನ್ನು ಗಲ್ಲಕ್ಕೆ ಸುತ್ತಿಕೊಂಡಿದ್ದು ಗೊತ್ತಾಗಿ ತುಸು ಸಮಾಧಾನವಾಯಿತು.

ಒಂದೇ ಬೈಕಿನಲ್ಲಿ ಮೂವರು ಯುವಕರು ಭರ್ರೆಂದು ಬಂದು ಬೀಡಾ ಅಂಗಡಿ ಮುಂದೆ ಇಳಿದರು. ಎಲ್ಲರ ಎಡಗಿವಿಯಲ್ಲಿ ಜೋತಾಡುತ್ತಿದ್ದ ಮುಖಗವಸುಗಳು ಕರ್ಣಕವಚಗಳಾಗಿ ಬದಲಾಗಿದ್ದವು. ಈ ಹುಡುಗರು ಮಾಸ್ಕುಗಳನ್ನು ಹಿಂದೆ ಉಡುದಾರಕ್ಕೆ ಕಟ್ಟುತ್ತಿದ್ದ ಮಂತ್ರಿಸಿದ ತಾಯತದಂತೆ ಭಾವಿಸಿರುವುದನ್ನು ಕಂಡು ತಿಂಗಳೇಶ ಸಹಜವಾಗಿ ಮೆಚ್ಚಿಕೊಂಡ.

ADVERTISEMENT

ಬ್ಯಾರಿಕೇಡ್ ಬಳಿ ಕಾವಲಿದ್ದ ಪೊಲೀಸಪ್ಪ ಮರೆಯಲ್ಲಿ ನಿಂತು ಮಾಸ್ಕನ್ನು ಕೇಂದ್ರ ಕಾರಾಗೃಹದ ಕಿರುಬಾಗಿಲಿನಂತೆ ನಿಧಾನವಾಗಿ ತೆರೆದು, ಒಂದೆರಡು ಬಾರಿ ಸಿಗರೇಟು ಎಳೆದು ಮತ್ತೆ ಮಾಸ್ಕ್ ಬಾಗಿಲು ಮುಚ್ಚುತ್ತಿದ್ದ.

ಜನ ಮಾರೀ ಮೇಲಿನ ಮಾಸ್ಕನ್ನು ಬಳಸುವ ಸೃಜನಶೀಲ ವಿಧಾನಗಳನ್ನು ಗಮನಿಸಿದ ಕೊರೊನಮ್ಮ ತಿಂಗಳೇಶನ ಕಿವಿಯಲ್ಲಿ ಗಹಗಹಿಸಿದಂತಾಯಿತು. ಇಷ್ಟಕ್ಕೆ ಇಂದಿನ ಲೋಕಸಂಚಾರ ಸಾಕು ಎಂದು ಸಂಜೀವನ ಅಂಗಡಿ ತಲುಪಿದ. ಮಂಗಳೂರು ಮೂಲದ ಜಾಣ ಮಾಲೀಕ ತನ್ನ ಮುಖದ ಮೇಲಿನ ಮಾಸ್ಕನ್ನು ತೆಗೆದು ಮಂಜುನಾಥಸ್ವಾಮಿ ಫೋಟೊಗೆ ತಗುಲಿಹಾಕಿದ್ದ. ಪತ್ರಿಕೆ ತೆರೆದರೆ ವೈದ್ಯಮಂತ್ರಿ ಹೇಳಿಕೆ: ‘ಇನ್ನು ನಮ್ಮನ್ನು ದೇವರೇ ಕಾಪಾಡಬೇಕು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.