ADVERTISEMENT

ದೆಹಲಿ ಎಂಬ ‘ತುಳಸೀವನ’!

ಸುಮಂಗಲಾ
Published 17 ನವೆಂಬರ್ 2019, 17:04 IST
Last Updated 17 ನವೆಂಬರ್ 2019, 17:04 IST
Churumuri18-11-2019
Churumuri18-11-2019   

ಗೆಳತಿಯ ಮಗಳು ಲ್ಯಾಪ್ಟಾಪ್ ತೆರೆದಿಟ್ಟುಕೊಂಡು ಘನಗಂಭೀರವಾಗಿ ಕೂತಿದ್ದಳು. ‘ಏನವ್ವಾ... ಮತ್ತೇನು ಹೊಸದು ಕಂಡುಹಿಡಿದೀರಿ’ ಎಂದು ಕೇಳಿದೆ.

‘ಮಂದಿ ಕೈಯಾಗ ರೊಕ್ಕ ಕುಣೀತದ ಅಂತ ಮದಿವಿಯಾಗತಾರ, ಅಲ್ಲಿ ಇಲ್ಲಿ ಓಡಾಡತಾರ. ಅದರರ್ಥ ನಮ್ಮ ಆರ್ಥಿಕತೆ ಅಗದಿ ಭಯಂಕರ ಸ್ಟ್ರಾಂಗ್ ಅದ ಅಂತ ನಮ್ಮ ರೈಲು ಮಂತ್ರಿಗಳು ಕಂಡ್ ಹಿಡಿದಾರ‍್ರಿ. 2014ಕ್ಕಿಂತ ಮದ್ಲು ಎಷ್ಟ್ ಕಡಿಮೆ ಮದಿವಿ ಆಗತಿದ್ವು, 2014ರ ನಂತರ ನಮೋಯುಗದಾಗೆ ಎಷ್ಟ್ ಮದಿವಿ ಹೆಚ್ಚಾಗ್ಯಾವು, ಅದ್ರಾಗೂ ಈ ವರ್ಸ ಎಷ್ಟ್ ಮದಿವಿ ಹೆಚ್ಚಾಗ್ಯಾವ. ಹಂಗೇ ರೈಲು, ವಿಮಾನದಾಗ ಎಷ್ಟ್ ಮಂದಿ ಹೆಚ್ಚಿಗಿ ಓಡಾಡಕ ಹತ್ಯಾರ ಅಂತ ಸಮೀಕ್ಷೆ ಮಾಡತೀವ್ರಿ. ಅದಕ್ಕ ಪ್ರಶ್ನಾವಳಿ ಮಾಡಾಕಹತ್ತೇವ್ರಿ’ ಎಂದಳು.

‘ಹಳ್ಳಿವಳಗ ಮಂದಿ ಕೊಳ್ಳೂದನ್ನು ಕಡಿಮೆ ಮಾಡ್ಯಾರಂತ, ತಯಾರಿಕಾ ವಲಯದೊಳಗ ಭಾರೀ ಕುಸಿತ ಅಂತಾರಲ್ಲ... ಅದ್ ಸುಳ್ಳನು ಹಂಗಿದ್ರೆ’.

ADVERTISEMENT

‘ಅದ್ ಖರೇ ಇದ್ರೂ ಛಲೋ ಸುದ್ದಿನೇ ಆತಲ್ರಿ. ಹಳ್ಳಿ ಮಂದಿ ಕೊಳ್ಳುಬಾಕ ಸಂಸ್ಕೃತಿಯನ್ನ ಕೈಬಿಟ್ಟಾರ‍್ರಿ, ಅಂದ್ರ ಸರಳ ಬದುಕು ನಡಸಾಕ ಮುಂದಾಗ್ಯಾರ. ಗಾಂಧೀಜಿ ಬೋಧನೆಯನ್ನ ಈಗ ನಮೋಯುಗದಾಗೆ ನಿಜ ಮಾಡ್ತಿದಾರ‍್ರಿ. ಜಿಡಿಪಿ ಅಳೆಯಾಕ ಬೇರೆ ಬೇರೆ ಹೊಸ ಮಾನದಂಡಗಳನ್ನ ಬಳಸಬೇಕ್ರಿ. ಕಾಲ ಬದ್ಲಾಗೇದ...’ ಎಂದು ಹೆಮ್ಮೆಯಿಂದ ಉಲಿದಳು.

‘ದೆಹಲಿ ಮಾಲಿನ್ಯ ಅಳೆಯಕ್ಕೂ ಹೊಸ ಮಾನದಂಡ ಅಂತಲ್ಲವ್ವಾ... ದೆಹಲಿ ಸಂಸದರು ಇಂದೋರ್ ರಸ್ತೆನಾಗೆ ಜಿಲೇಬಿ ತಿನ್ತಾ, ನಕ್ಕೋತ, ಮತ್ತ ಕ್ರಿಕೆಟ್ ಕಾಮೆಂಟರಿ ವಳಗ ಅಷ್ಟೇ ಗಂಭೀರವಾಗಿ ಮುಳುಗಿದ್ರು ಅಂದ್ರ ಮಾಲಿನ್ಯವೇ ಇಲ್ಲ, ಎಲ್ಲ ಅಗದಿ ಬರೋಬ್ಬರಿ ಅದ ಅಂತರ್ಥ ಹೌದಿಲ್ಲೋ’.

‘ಮಾಲಿನ್ಯ ಹೆಚ್ಚದ ಅಂದ್ರ ಮೂಗು, ಕಣ್ಣಿಗೆ ತುಳಸೀ ಎಲೆ ಇಟ್ಟುಕೋಬೇಕ್ರಿ. ತುಳಸಿ ಎಲೆ ಎಲ್ಲಾ ಥರದ ವಿಕಿರಣ ಹೀರಿಕೊಳ್ತದಂತ ನಮ್ಮ ಬಾಬಾರು ಹೇಳ್ಯಾರಿ. ಆಮ್ ಆದ್ಮಿಗಳು ಸುಳ್ಳೆ ಆಪಾದನೆ ಮಾಡೂದು ಬಿಟ್ಟು ದೆಹಲಿ ತುಂಬ ತುಳಸೀವನ ಬೆಳೀಬೇಕ್ರಿ’ ಎನ್ನುತ್ತ ‘ಪತಂಜಲಿ ತುಳಸಿ’ಯನ್ನು ಲ್ಯಾಪ್ಟಾಪ್‍ಗೆ ಏರಿಸಿದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.