ADVERTISEMENT

ಚುರುಮುರಿ: ಗೈಡ್‌ಲೈನ್ಸ್ (ಕಡೆ)ಗಣನೆ!

ಎಸ್.ಬಿ.ರಂಗನಾಥ್
Published 28 ಏಪ್ರಿಲ್ 2021, 19:01 IST
Last Updated 28 ಏಪ್ರಿಲ್ 2021, 19:01 IST
ಚುರುಮುರಿ
ಚುರುಮುರಿ   

ಹೊರಗಿನಿಂದ ಬಂದ ನನ್ನನ್ನು ನೋಡುತ್ತಿದ್ದಂತೆ, ಸರ್ವಾಲಂಕಾರಭೂಷಿತೆಯಾಗಿದ್ದ ಮಡದಿ ಧುಮುಗುಟ್ಟುತ್ತಾ ‘ಇದ್ಯಾಕ್ರೀ ಕುಂಟ್ತಿದೀರಾ’ ಎಂದಳು.

‘ಹಾಲಿನ ಅಂಗ್ಡಿಗೆ ಹೋಗೋವಾಗ ಮಾಸ್ಕ್ ಮರೆತಿದ್ದೆ. ಪೊಲೀಸ್ ಬಂದಾಂತ ಹೆದರಿ ಓಡೋವಾಗ ಬಿದ್ಬಿಟ್ಟೆ. ಆಮೇಲೆ ನೋಡಿದ್ರೆ ಅವ್ನು ಪೊಲೀಸಲ್ಲ, ಯೂನಿಫಾರಮ್‌ನಲ್ಲಿದ್ದ ಮಾಲ್‌ನ ಸೆಕ್ಯೂರಿಟಿ ಗಾರ್ಡ್!’ ಎಂದೆ.

‘ಲಾಕ್‌ಡೌನು, ಕರ್ಫ್ಯೂ ಶುರುವಾಗಿದೆ, ದಂಡ ಹಾಕ್ತಾರೆ, ತಪರಾಕಿ ಬೀಳ್ತಾವೆ ಅನ್ನೋ ಪ್ರಜ್ಞೆ ಬೇಡ್ವೇ? ಅಷ್ಟೊಂದು ಗೈಡ್‌ಲೈನ್ಸ್ ಕೊಟ್ಟಿದಾರೆ. ನಿಮ್ಮಂಥೋರಿಗೆ ಹಂಗೇ ಆಗ್ಬೇಕು, ಪೊಲೀಸೂ ಗಾರ್ಡೂ ಗೊತ್ತಾಗ್ದಂತ ಬುದ್ಧೂಗಳು!’

ADVERTISEMENT

‘ಅವಸರದಲ್ಲಿ ಕನ್ನಡಕಾನೂ ಬಿಟ್ಟೋಗಿದ್ದೆ... ಅದ್ಸರಿ ನೀನು ಫ್ರೆಂಡ್ ಮಗಳ ಮದುವೆ ಮುಹೂರ್ತಕ್ಕೇಂತ ಬೆಳಿಗ್ಗೇನೇ ಹೋಗಿದ್ಯಲ್ಲ...?’

‘ಹೋಗಿದ್ದೇರೀ. ಕಲ್ಯಾಣ ಮಂಟಪದಲ್ಲಿ ಪೊಲೀಸ್ರು, ರೆವಿನ್ಯೂ ಅಧಿಕಾರಿಗಳು ಸಂಖ್ಯಾಮಿತಿ ಮೀರಿದೇಂತ ಫೈನ್ ಹಾಕ್ತಿದ್ರು. ಅದಕ್ಕಿಂತ ಹೆಚ್ಚಿಗೆ ಜನ ಆದ್ರು ಅಂತ ನನ್ನನ್ನ ವಾಪಸ್‌ ಕಳಿಸಿದ್ರು... ಹೀಗಿದ್ದಾಗ ಆಕೆ ಮನೆಗೆ ಬಂದು ಇನ್ವಿಟೇಷನ್ ಯಾಕೆ ಕೊಡ್ಬೇಕಿತ್ತು?‌ ಅವ್ಳು ಕೈಗೆ ಸಿಗ್ಲಿ...’

‘ಆಗಿನ್ನೂ ಈ ನಿರ್ಬಂಧ ಬಂದಿರ್ಲಿಲ್ಲ. ಗೈಡ್‌ಲೈನ್ಸಲ್ಲಿ ಮದುವೆ ಪ್ರವೇಶ ಮಿತೀನೂ ಸೇರಿರೋದನ್ನ ನೀನು ಗಮನಿಸಲಿಲ್ಲ ಅನ್ಸುತ್ತೆ’.

‘ಹಾಗಿದ್ರೆ, ಆಕೆ ನಿನ್ನೇನಾದ್ರೂಹೇಳ್ಬೇಕಿತ್ತಲ್ವೇ?’

‘ಪೇಪರ್‌ಗೆ ಹಾಕ್ಸಿರ್ತಾರೆ’.

ಅಷ್ಟರಲ್ಲಿ ಬಂದ ನಮ್ಮ ಮಗ ಹೈಸ್ಕೂಲ್ ವಿದ್ಯಾರ್ಥಿ, ಲೋಕಲ್ ಪತ್ರಿಕೆ ತೋರಿಸಿದಾಗ ನಮ್ಮಾಕೆ ಸುಸ್ತು!

ನಾನು, ‘ಥೂ, ಎಲ್ಲಾ ಈ ಕೋವಿಡ್ ಮಾರಿಯ ಹಾವಳಿ’ ಎಂದೆ.‌

ಮಗ, ‘ಅಪ್ಪಾ, ಇದ್ರಿಂದ ಕೆಲವ್ರಿಗೆ
ಒಳ್ಳೇದಾಗಿದೆಯಲ್ಲಾ!’ ಎಂದ.

ಅವನಮ್ಮ ‘ಯಾರಿಗೋ?’ ಎಂದು ಕಣ್ಣು ಕೆಂಪಗೆ ಮಾಡಿದಳು‌.

‘ನಂಗೆ ಮೊಬೈಲ್ ಕೊಡಿಸಿದ್ರಿ. ಪರೀಕ್ಷೆ ಬರೀದೇನೆ ನಾನು ಪಾಸಾಗಿದೀನಿ... ವರ್ಷವಿಡೀ ರಜಾ ಮಜಾ...!’

ನನ್ನಾಕೆ ಮಗನತ್ತ ಎಸೆದ ವ್ಯಾನಿಟಿ ಬ್ಯಾಗ್‌ಗೆ, ಅವನಿಗೆ ರಕ್ಷಣೆ ನೀಡಿದ ನನ್ನ ಎದೆ ಗುರಾಣಿಯಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.