ADVERTISEMENT

ತಾವರೆ ತುಲಾಭಾರ

ಸುಮಂಗಲಾ
Published 9 ಜೂನ್ 2019, 18:30 IST
Last Updated 9 ಜೂನ್ 2019, 18:30 IST
   

ಶನಿವಾರವಿಡೀ ನಾಪತ್ತೆಯಾಗಿದ್ದ ಬೆಕ್ಕಣ್ಣ ಭಾನುವಾರ ಬೆಳಗ್ಗೆ ಬಂದದ್ದೇ, ಕೇರಳಕ್ಕೆ ಹೋಗಿದ್ದೆನೆಂದು ಕುಣಿಯುತ್ತ ಹೇಳಿತು. ‘ಮುಂಗಾರು ಎದುರುಗೊಳ್ಳಾಕ ಹೋಗಿದ್ಯೇನು’ ಅಚ್ಚರಿಯಿಂದ ಕೇಳಿದೆ.

‘ಅದಕ ಹವಾಮಾನ ಇಲಾಖೆಯವ್ರು ಇದಾರ. ನಮ್ಮ ರಾಜ್ಯದಾಗಂತೂ ಲಕ್ಷಗಟ್ಟಲೆ ರೊಕ್ಕ ಬಡದು ಮೋಡ ಬಿತ್ತನೆ ಮಾಡತಾರಂತ, ಆ ಮೋಡಗಳು ನಮ್ಮಲ್ಲೇ ಸುರೀಲಿ ಅಂತ ಮುಜರಾಯಿ ಇಲಾಖೆಯವರು ಹೋಮ, ಹವನ ಮಾಡಿಸ್ತಾರಂತ. ನಾ ಎದಕ್ಕ ತೆಲಿ ಕೆಡಿಸ್ಕೊಳ್ಳಲಿ’ ಎಂದು ಭಾಷಣ ಕುಟ್ಟಿತು.

‘ರಾಗಾ ಅಂಕಲ್ ವಯನಾಡಿಗೆ ಬಂದಿದ್ದನಲ್ಲ, ನೋಡಾಕ ಹೋಗಿದ್ದೆ. ಒಂದೆರಡು ವರ್ಸದಾಗ, ವಯನಾಡು ಅಂದ್ರ ಅಮರಾವತಿ ಮೀರಿಸೂವಂಗ ಮಾಡ್ತಾನ ನೋಡ್ತಿರು. ಅಲ್ಲಿಂದ ಗುರುವಾಯೂರಿಗೆ ಹೋಗಿದ್ದೆ’ ಎಂದಿತು.

ADVERTISEMENT

‘ಇಲಿ, ಹೆಗ್ಗಣ ಹಿಡಿಯೂದ್ ಬಿಟ್ಟು ವಳ್ಳೆ ದೇವಸ್ಥಾನ ಸುತ್ತುತೀಯಲ್ಲ...’ ಎಂದು ಚುಚ್ಚಿದೆ. ‘ಮೋದಿ ಮಾಮನ ತಾವರೆ ತುಲಾಭಾರ ನೋಡಾಕ ಹೋಗಿದ್ದೆ... ಪಂಚೆ ಹಾಕಿ, ಶಲ್ಯ ಹೊದ್ದು ಪಕ್ಕಾ ಕೇರಳಿಗನ ಹಂಗೇ ಕಾಣ್ತಿದ್ರು. ಎಷ್ಟ್ ಮಂದಿ... ಏನ್ ವೈಭೋಗ’ ಎಂದೆಲ್ಲ ವರ್ಣಿಸಿತು.

‘ಅಲ್ಲಲೇ... ನಿಮ್ಮ ಮೋದಿಮಾಮ, ದೇಹತೂಕ 75 ಕೆ.ಜಿಗಿಂತ ಹೆಚ್ಚಾಗಬಾರದು ಅಂತ ದಿನಾ ಯೋಗ ಮಾಡತಾನಂತ. ಮತ್ತ 112 ಕೆ.ಜಿ ತಾವರೆ ಮೊಗ್ಗು ಎದಕ್ಕ ತರಿಸಿದ್ದರಂತೆ’ ಕೇಳಿದೆ. ‘ಅಷ್ಟೂ ಗೊತ್ತಿಲ್ಲೇನ್... ಈಗ ಅವ್ರು ಮೋದಿ 2.0 ವರ್ಷನ್, ಮಾಲ್ಡೀವ್ಸ್ ಸರ್ಕಾರನೂ ಪ್ರಶಸ್ತಿ ಕೊಟ್ಟೇದ. ಅದಕ್ಕ ತೂಕ ಹೆಚ್ಚಾಗೇತಿ. ಅದ್ಸರಿ... ಹೂವು, ಹಣ್ಣು, ನಾಣ್ಯ ಹಿಂತಾದ್ರಗನೇ ಎದಕ್ಕ ತುಲಾಭಾರ ಮಾಡ್ತಾರ... ರೈತರ ಆತ್ಮಹತ್ಯೆ, ನೀರಿನ ಕೊರತೆ ಹಿಂತಾ ಎಲ್ಲ ಸಮಸ್ಯೆ ಪಟ್ಟಿನ ತುಲಾಭಾರಕ್ಕೆ ಎದಕ್ಕೆ ಹಾಕಂಗಿಲ್ಲ’ ಬೆಕ್ಕಣ್ಣ ಕೇಳಿತು. ‘ಅಲ್ಲೇ ನಿನ್ ಮೋದಿಮಾಮಾಗ ಕೇಳೂದಿತ್ತು’ ಎಂದು ಮೂತಿಗೆ ತಿವಿದೆ.

‘ಮಾಮನ ಮಾತು ಕೇಳೂ ಮುಂದ ಪೂರಾ ಸುಂದಾಗಿರ್ತೇವಿ. ಅವಾಗ ತೆಲ್ಯಾಗೇನೂ ಪ್ರಶ್ನಿನೇ ಬರವಲ್ದು’ ಎಂದ ಬೆಕ್ಕಣ್ಣ, ಸಮಸ್ತ ಭರತಖಂಡದ ಮತದಾರರನ್ನು ಪ್ರತಿನಿಧಿಸುವಂತೆ ಪೆಚ್ಚುನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.