ADVERTISEMENT

ಭಾರತಮ್ಮ ನಕ್ಕಳು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:58 IST
Last Updated 26 ಫೆಬ್ರುವರಿ 2020, 19:58 IST
ಚುರುಮುರಿ
ಚುರುಮುರಿ   

‘ಜೈ ಭಾರತ ಮಾತಾ, ಜೈಜೈ...’ ಗುಂಪುಗಳು ಜೈಕಾರ ಹಾಕಿದವು. ‘ಸುಪುತ್ರರೇ, ಯಾಕೆ ಇಷ್ಟೊಂದು ಜೈಕಾರ?’ ಕೇಳಿದಳು ಮಾತೆ.

‘ಭಾರತಮ್ಮ, ನಿನಗೆ ಆತಂಕ ಎದುರಾಗಿದೆ. ಹೊರಗೆ, ಒಳಗೆ ಶತ್ರುಗಳು ನಿನ್ನನ್ನು ಕಾಡುತ್ತಿದ್ದಾರೆ. ನಿನ್ನ ರಕ್ಷಣೆಗೆ ನಾವಿದ್ದೇವೆ ಧೈರ್ಯವಾಗಿರು’ ಎಂದಿತು ಒಂದು ಗುಂಪು.

‘ಇವರಿಗಿಂತಾ ಹೆಚ್ಚಿನ ರಕ್ಷಣೆ ನಾವು ಕೊಡ್ತೀವಿ’ ಇನ್ನೊಂದು ಗುಂಪು ಹೇಳಿತು.

ADVERTISEMENT

ಭಾರತ ಮಾತೆ ನಕ್ಕಳು. ‘ನನಗೆ ಯಾವ ತೊಂದರೆಯೂ ಆಗುವುದಿಲ್ಲ. ನನ್ನ ರಕ್ಷಣೆಯ ಉಸಾಬರಿ ನಿಮಗೆ ಬೇಡ’ ಎಂದಳು.

‘ಹಾಗಲ್ಲ ಮಾತೆ, ನಾವು ಶತ್ರುಗಳ ರುಂಡ ಚೆಂಡಾಡುತ್ತೇವೆ’ ಒಂದು ಗುಂಪು.

‘ನಾವೂ ಚೆಂಡಾಡದೇ ಬಿಡುವುದಿಲ್ಲ’ ಇನ್ನೊಂದು ಗುಂಪು.

‘ವೀರರೇ, ನಿಮ್ಮಂತೆ ಚೆಂಡಾಟ ಆಡಿದ ಅದೆಷ್ಟೋ ಶೂರರು ದಾಖಲೆ ಇಲ್ಲದಂತೆ ಮರೆಯಾಗಿ ಹೋಗಿದ್ದಾರೆ. ನನ್ನ ಇತಿಹಾಸದ ಪುಟಗಳನ್ನು ತೆರೆದು ನೋಡಿ’ ಎಂದು ಇತಿಹಾಸದ ಪುಸ್ತಕ ಕೊಟ್ಟಳು.

‘ಇದೇನು ಮಾತೆ, ನಿನ್ನ ಇತಿಹಾಸದ ಪುಟಗಳಲ್ಲಿ ರಕ್ತದ ಕಲೆ ಮಾಸದೆ ಉಳಿದಿದೆ. ಪುಟಪುಟಗಳಲ್ಲೂ ನೆತ್ತರು, ಸತ್ತರು ಎನ್ನುವ ಹೆಡ್‍ಲೈನ್‍ಗಳೇ ಕಾಣುತ್ತಿವೆ’.

‘ಹೌದು, ಶತಶತಮಾನಗಳಿಂದ ರಾಜಮಹಾರಾಜರು ನನ್ನ ರಕ್ಷಣೆ ನೆಪದಲ್ಲಿ ಸಿಂಹಾಸನ ಹಿಡಿಯಲು ಲೆಕ್ಕವಿಲ್ಲದಷ್ಟು ಯುದ್ಧ ಮಾಡಿ ರಕ್ತ ಹರಿಸಿದ ಕಥೆ, ವ್ಯಥೆ ನನ್ನ
ಇತಿಹಾಸದಲ್ಲಿದೆ ಓದಿ’.

‘ಹೌದು ಮಾತೆ, ದೇಶ ರಕ್ಷಣೆ, ಸಾಮ್ರಾಜ್ಯ ಸ್ಥಾಪನೆಗಾಗಿ ರಕ್ತದ ಕೋಡಿಯೇ ಹರಿದಿದೆ. ಸ್ಟೇಡಿಯಂನಲ್ಲಿ ಕ್ರಿಕೆಟ್ ನಡೆಯೋ ರೀತಿ ಎಲ್ಲಾ ಯುದ್ಧಗಳು ಒಂದೇ ರಣರಂಗದಲ್ಲಿ ನಡೆದಿದ್ದರೆ ಕಾವೇರಿ ನದಿ ಗಾತ್ರದ ರಕ್ತದ ನದಿ ಹರಿಯುತ್ತಿತ್ತೇನೋ’.

‘ಅಷ್ಟೂ ರಕ್ತ ಕೂಡಿಟ್ಟಿದ್ದರೆ ದೇಶದ ತುಂಬಾ ಪೆಟ್ರೋಲ್ ಬಂಕ್ ರೀತಿ ಬ್ಲಡ್ ಬ್ಯಾಂಕ್ ಸ್ಥಾಪಿಸಬಹುದಾಗಿತ್ತು’ ಭಾರತಮ್ಮ ಮತ್ತೊಮ್ಮೆ ನಕ್ಕಳು. ‘ಈಗ ತಿಳಿಯಿತೇ, ನನ್ನ ರಕ್ಷಣೆ ಚಿಂತೆ ಬಿಟ್ಟು, ನಿಮ್ಮ ನಿಮ್ಮ ರಕ್ಷಣೆ ನೋಡಿಕೊಳ್ಳಿ...’ ಎನ್ನುತ್ತಾ ಮಾಯವಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.