ADVERTISEMENT

ಚುರುಮುರಿ | ಮೌಂಟನ್ ಮೀಟಿಂಗ್!

ತುರುವೇಕೆರೆ ಪ್ರಸಾದ್
Published 4 ಜುಲೈ 2025, 22:23 IST
Last Updated 4 ಜುಲೈ 2025, 22:23 IST
   

‘ಇದೇನಪ್ಪ ನಮ್ ಸರ್ಕಾರದೋರು ಬೆಟ್ಟ, ಗುಡ್ಡದ ಮ್ಯಾಲೆಲ್ಲಾ ಕ್ಯಾಬಿನೆಟ್ ಮೀಟಿಂಗ್ ಶುರು ಹಚ್ಕಂಡವ್ರೆ’ ಎಂದು ಸಿಬಿರೆಬ್ಬಿದ ಗುದ್ಲಿಂಗ.

‘ವಿಧಾನಸೌಧದಲ್ಲಿ ಇದ್ದೂ ಇದ್ದೂ ಬೇಜಾರಾಗದೆ, ಫಾರ್ ಎ ಚೇಂಜ್ ಅಂತ ಮಾಡವ್ರೆ ಕಣ್ಲಾ’ ಎಂದ ಮಾಲಿಂಗ.

‘ಬೆಳಗಾವಿದು ಚೇಂಜೇ ಅಲ್ವಾ? ಎಲ್ಲಂದ್ರಲ್ಲಿ ಕ್ಯಾಬಿನೆಟ್ ಮೀಟಿಂಗ್ ಮಾಡಕ್ಕೆ ಮಂತ್ರಿಮಂಡಲ ಏನ್ ಟೂರಿಂಗ್ ಟಾಕೀಸೇನ್ಲಾ?’

ADVERTISEMENT

‘ಶಾಸಕರ ಅಹವಾಲು, ಆಪರೇಷನ್ ಸುರ್ಜೆವಾಲು ಅದೂ ಇದೂ ಅಂತ ವಿಪರೀತ ತಲೆಬಿಸಿ. ತಂಪಾಗಿರಣ ಅಂತ ಹಿಲ್ ಸ್ಟೇಷನ್ ಹುಡಿಕ್ಕಂಡವ್ರೆ ಕಣ್ಲಾ’.

‘ಅಂಗೇ ಈ ನೆವದಲ್ಲಿ ಬೆಟ್ಟ ಹತ್ತಿ ಇಳುದ್ರೆ ಮೀಟಿಂಗ್ ನೆವದಲ್ಲಿ ಅವರ ಫಿಟ್ನೆಸ್ಸೂ ಚೆನ್ನಾಗಿರುತ್ತೆ’.

‘ಸುಮ್ಕಿರ‍್ಲಾ? ಅಲ್ಯಾರ್ ಉಸ್ ಅಂತ ಹೊಗೆ ಬಿಟ್ಕಂಡು ನಡ್ದಾರು? ಕಾರಲ್ ಓಯ್ತರೆ, ಕಾರಲ್ಲಿ ಬತ್ತಾರೆ’.

‘ಅದೇನೋ ನಿಜಾನೇ! ಜೊತೆಗೆ ದೇವ್ರುಗೆ ಹರಕೆ, ಪರಕೆನ ಗುಟ್ಟಾಗಿ ತೀರ‍್ಸಕ್ಕೂ ಅನುಕೂಲ ಆಯ್ತದೆ. ವಿಧಾನಸೌಧದಲ್ಲಿ ಗೊರಕೆ ಹೊಡ್ದಿದ್ದೇ ಆಗಿರ‍್ತದೆ’.

‘ಆದ್ರೆ ಬೆಟ್ಟ ಗುಡ್ಡದ ಮ್ಯಾಲೆಲ್ಲಾ ಕ್ಯಾಬಿನೆಟ್ ಮೀಟಿಂಗ್ ಮಾಡುದ್ರ ಸಿಕ್ಕಾಪಟ್ಟೆ ಖರ್ಚು ಬರಕಿಲ್ವಾ?’ ಕೇಳಿದ ಪರ‍್ಮೇಶಿ.

‘ಬೆಟ್ಟದ ಮೇಲೊಂದು ಕ್ಯಾಬಿನೆಟ್ ಮೀಟಿಂಗ್ ಮಾಡಿ ವಿರೋಧಿಗಳ ನಿಂದೆಗೆ ಅಂಜಿದೊಡೆಂತಯ್ಯಾ! ಖರ್ಚು ಬತ್ತದಪ್ಪ, ಅಂಗಂತ ಕುಂತ್ ಕಡೇನೆ ಕುಂತು ಕುರ್ಚಿ ಸವೆಸಕ್ಕಾಯ್ತದಾ? ಥಿಂಕ್ ಹೈ, ಲಿವ್ ಹೈ ಅಂತ ಹೇಳಕಿಲ್ವೇನ್ಲಾ?’

‘ಅಂಗಾರೆ ಮುಳ್ಳಯ್ಯನ ಗಿರಿ, ದೇವರಾಯನ ದುರ್ಗ ಎಲ್ಲಾ ಕಡೆ ತಿಂಗಳಿಗೊಂದು ಮೀಟಿಂಗ್ ಮಡಿಕ್ಕಂಡ್ ಬುಡ್ಬಹುದಲ್ವಾ?’

‘ಸುಮ್ಕೆ ಮಾಡದಲ್ಲ, ಕ್ಲಿಯರ್‌ ಆಗ್ಬೇಕು ಫೈಲು, ಆಗಬಾರದು ಬೆಟ್ಟಕ್ಕೆ ಹೊತ್ತಂಗೆ ಕಲ್ಲು’.

‘ಲೇಯ್! ರಾಜಕೀಯದೋರು ಬೆಟ್ಟಕ್ಕೆ ಕಲ್ ಹೊರಕಿಲ್ಲ ಕಣ್ರೋ, ಬೆಟ್ಟದಿಂದ ಕಲ್ ಇಳುಸ್ತಾರೆ’ ಎಂದು ಕಣ್ ಹೊಡೆದ ಪರ‍್ಮೇಶಿ. ಎಲ್ಲಾ ಹೌದೌದು ಎಂದು ತಲೆಯಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.