ಚುರುಮುರಿ: ಕಳವು ಕಳವಳ..
ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಒಡವೆ ಬಿಡಿಸಿಕೊಳ್ಳಲು ಶಂಕ್ರಿ, ಸುಮಿ ಬಂದಿದ್ದರು.
‘ಹಬ್ಬ, ಮದುವೆ, ಗೃಹಪ್ರವೇಶಗಳಲ್ಲಿ ತೊಟ್ಟುಕೊಂಡು ಮುಗಿದ ಮೇಲೆ ತಂದು ಬ್ಯಾಂಕ್ ಲಾಕರ್‌ನಲ್ಲಿಡುವ ಸೌಭಾಗ್ಯಕ್ಕೆ ಒಡವೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಬೇಕಾ?’ ಶಂಕ್ರಿ ಗೊಣಗಿಕೊಂಡ.
‘ಸರಗಳ್ಳರ ಹಾವಳಿ ಜಾಸ್ತಿಯಾಗಿದೆ ಕಣ್ರೀ, ಮಾಂಗಲ್ಯ ಸರವನ್ನೂ ಲಾಕರ್‌ನಲ್ಲಿಟ್ಟು ಕರಿಮಣಿ ಸರ ಹಾಕಿಕೊಂಡು ಬಾಳ್ತಿದ್ದೀನಿ’ ಅಂದಳು ಸುಮಿ.
‘ಹೌದು. ಮೊನ್ನೆ ನಮ್ಮ ಮನೆ ಹತ್ರ ಕಳ್ಳರು ಹೆಂಗಸಿನ 60 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಹೋದ್ರು. ಆಕೆ ಮೂರು ದಿನ ಅಡುಗೇನೂ ಮಾಡಲಿಲ್ಲ, ಊಟಾನೂ ಮಾಡಲಿಲ್ಲ’ ಬ್ಯಾಂಕ್ ಅಧಿಕಾರಿ ಹೇಳಿದರು.
‘ಪಾಪ! ಆಮೇಲೆ ಏನಾಯ್ತು?’
‘ನಾಲ್ಕನೇ ದಿನ ಗಂಡ ಹೋಟೆಲ್‌ನಿಂದ ಊಟ ತಂದು ಅವಳಿಗೆ ತಿನ್ನಿಸಿ ಸಮಾಧಾನ ಮಾಡಿದ’.
‘ನಮ್ಮ ಏರಿಯಾದಲ್ಲೂ ಕಳ್ಳತನ ಜಾಸ್ತಿಯಾಗಿವೆ. ಹೋದ ವಾರ ಯಾರೋ ಒಬ್ಬ ಪಕ್ಕದ ಮನೆ ಹುಡುಗಿಯ ಹೃದಯ ಕದ್ದ. ಹುಡುಗಿ ಮನೆಯವರು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟರು’.
‘ಕಿಡ್ನಿ ಕದಿಯುವುದು ಅಪರಾಧ. ಹೃದಯ ಕದಿಯುವುದು ಅಫೆನ್ಸ್ ಅಲ್ಲ ಮೇಡಂ’.
‘ಹೃದಯ ಕದ್ದವನು, ಕಳೆದುಕೊಂಡವಳು ಮನೆ ಬಿಟ್ಟು ಓಡಿಹೋಗಿದ್ದರು. ಪೊಲೀಸರು ಪತ್ತೆ ಮಾಡಿ ಕರೆತಂದು ವಿಚಾರಣೆ ಮಾಡಿದರು. ಅವರಿಬ್ಬರ ಹೃದಯ ಅದಲು ಬದಲಾಗಿದ್ದವು! ಪೊಲೀಸರೇ ಮುಂದೆ ನಿಂತು ಅವರಿಬ್ಬರಿಗೂ ಮದುವೆ ಮಾಡಿಸಿದರು’.
‘ಈಗಂತೂ ತರಾವರಿ ಕಳ್ಳತನಗಳಾಗ್ತಿವೆ. ಹೊಸದಾಗಿ ಮತಗಳ್ಳತನ ಶುರುವಾಗಿದೆಯಂತೆ’.
‘ಒಡವೆ ಇಟ್ಟುಕೊಳ್ಳುವಂತೆ ಮತಗಳನ್ನೂ ನಿಮ್ಮ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟುಕೊಳ್ತೀರಾ?’
‘ಇಲ್ಲ ಮೇಡಂ, ಮತಗಳ ಲಾಕರ್ ಸೌಲಭ್ಯ ನಮ್ಮ ಬ್ಯಾಂಕಿನಲ್ಲಿಲ್ಲ. ಮತಗಳ ಸುಭದ್ರತೆಗೆ ರಾಜಕಾರಣಿಗಳು ಪ್ರತ್ಯೇಕ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ’ ಎಂದು ನಕ್ಕ ಅಧಿಕಾರಿ, ಸುಮಿಗೆ ಒಡವೆ ತೆಗೆದುಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.