ADVERTISEMENT

ಚುರುಮುರಿ: ಸಿಂಗಾಪುರದ ಕನಸು!

ಸುಮಂಗಲಾ
Published 15 ಜೂನ್ 2025, 20:39 IST
Last Updated 15 ಜೂನ್ 2025, 20:39 IST
<div class="paragraphs"><p>ಚುರುಮುರಿ: ಸಿಂಗಾಪುರದ ಕನಸು!</p></div>

ಚುರುಮುರಿ: ಸಿಂಗಾಪುರದ ಕನಸು!

   

ಸುದ್ದಿ ಓದುತ್ತಿದ್ದ ಬೆಕ್ಕಣ್ಣ ಬೆರಳು ಮಡಚಿ ತೆಗೆದು ಎಣಿಸುತ್ತಲೇ ಇತ್ತು. ಕೊನೆಗೊಮ್ಮೆ ತಲೆ ಕೊಡವಿ, ‘ಅಲ್ಲಾ, 1.15 ಲಕ್ಷ ಕೋಟಿ ರೂಪಾಯಿ ಅಂದರೆ ನೂರಾಹದಿನೈದರ ಮುಂದೆ ಎಷ್ಟ್‌ ಸೊನ್ನೆ ಬರತೈತಿ?’ ಎಂದು ಕೇಳಿತು.
ʼಲಕ್ಷ ಕೋಟಿ ಅಂದ್ರೆ ಭಾಳ ದೊಡ್ಡ ಸಂಖ್ಯೆ ಹಂಗೆಲ್ಲ ಥಟ್‌ ಅಂತ ಹೇಳೂದು ಕಷ್ಟ” ಎಂದು ಲೆಕ್ಕ ಮಾಡತೊಡಗಿದೆ. ʼ1.15 ಲಕ್ಷ ಕೋಟಿ ಅಂದರೆ 115ರ ಮುಂದೆ 9 ಸೊನ್ನೆ ಬರತಾವು. ಬೆಳ್‌ಬೆಳಗ್ಗೆ ಈ ಲೆಕ್ಕ ಎದಕ್ಕೆ?” ಎಂದು ಬೆಕ್ಕಣ್ಣನಿಗೆ ಕೇಳಿದೆ.
“ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಮಾಡಾಕೆ ಅಷ್ಟ್‌ ರೊಕ್ಕ ಬೇಕು ಅಂತ ಸಿದ್ದುಅಂಕಲ್ಲು ಹಣಕಾಸು ಆಯೋಗಕ್ಕೆ ಕೇಳ್ಯಾರೆ.” ಬೆಕ್ಕಣ್ಣ ವರದಿ ಒಪ್ಪಿಸಿತು.
“ಹಂಗಾರೆ ರಸ್ತೆಗಳ ಹೊಂಡಾಗುಂಡಿ ಮುಚ್ಚತಾರೆ. ಎಲ್ಲಾ ಕಡೆ ಫುಟ್‌ಪಾತಿನ ಕಲ್ಲು ತೆಗೆದು, ಮತ್ತೆ ಹೊಸಾದು ಹಾಕತಾರೆ”
“ಫುಟ್‌ಪಾತಿನ ಕಲ್ಲು ತೆಗೆದು, ಹೊಸದು ಹಾಕೋ ಕೆಲಸ ಬೆಂಗಳೂರಾಗೆ ವರ್ಷವಿಡೀ ನಡೀತೈತೆ. ಹೊಂಡಾಗುಂಡಿ ಮುಚ್ಚೋದೆಲ್ಲ ಚಿಲ್ಲರೆ ಕೆಲಸ. ಮೂಲಸೌಕರ್ಯ ಅಭಿವೃದ್ಧಿ ಅಂದ್ರ ಎಲ್ಲಾ ಕಡಿಗಿ ಫೈಓವರ್‌, ಎಲ್ಲಾ ಕಡಿಗಿ ಟನೆಲ್‌, ಎಲ್ಲಾ ಕಡಿಗಿ ಮೆಟ್ರೋ… ಅಂದ್ರ ಕಾಮಗಾರಿ, ಭ್ರಷ್ಟಾಚಾರ ಎಲ್ಲಾನೂ ದೊಡ್ಡ ಪ್ರಮಾಣದಲ್ಲಿ ಅಂತ ಅರ್ಥ” ಎಂದು ಬೆಕ್ಕಣ್ಣ ವಿವರಿಸಿತು.
“ಸಿದ್ದು ಅಂಕಲ್ಲು ಹೇಳಿರೋದೇನೋ ಖರೇನೇ… ನಾವು ಕೇಂದ್ರಕ್ಕೆ ಒಂದ್‌ ರೂಪಾಯಿ ತೆರಿಗೆ ಕೊಟ್ಟರೆ, ಅವ್ರು ನಮಗೆ ಬರೇ ಹದಿನೈದು ಪೈಸೆ ಕೊಡತಾರಂತೆ. ಆದರೆ ಬೆಂಗಳೂರನ್ನ ಸಿಂಗಾಪುರ ಮಾಡೋ ಭರಾಟೆಯಲ್ಲಿ ರಾಜ್ಯದ ಉಳಿದ ಭಾಗದ ಕಥಿ ಏನು?” ಎಂದೆ.
“ಅದಕ್ಕೇ ಮತ್ತೆ ಖರ್ಗೆ ಅಜ್ಜಾರು ಗರಂ ಆಗ್ಯಾರೆ. ಇಷ್ಟ್‌ ವರ್ಷದಿಂದ ಎಲ್ಲಾ ಮುಖ್ಯಮಂತ್ರಿಗಳೂ ಬೆಂಗಳೂರನ್ನ ಸಿಂಗಾಪುರ ಮಾಡತೀವಂತ ಹಾರಾಡಿದರು. ಮೊದ್ಲು ನಮ್‌ ಕಲ್ಯಾಣ ಕರ್ನಾಟಕನ ಬೆಂಗಳೂರು ಥರಾ ಮಾಡ್ರಿ ಸಾಕು ಅಂತ ಬೈದಿದಾರೆ” ಎಂದು ಬೆಕ್ಕಣ್ಣ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT